ಮಾ.31ರಿಂದ ಉಡುಪಿ ಜಿಲ್ಲೆಯ 55 ಕೇಂದ್ರಗಳಲ್ಲಿ ಎಸೆಸೆಲ್ಸಿ ಪರೀಕ್ಷೆ

ಉಡುಪಿ, ಮಾ.30: ಪ್ರಸಕ್ತ ಸಾಲಿನ ಎಸೆಸೆಲ್ಸಿ ಪರೀಕ್ಷೆಗಳು ನಾಳೆ (ಮಾ.31) ಜಿಲ್ಲೆಯ 55 ಪರೀಕ್ಷಾ ಕೇಂದ್ರಗಳಲ್ಲಿ ಪ್ರಾರಂಭಗೊಳ್ಳಲಿದ್ದು, ಎ.15ರವರೆಗೆ ನಡೆಯಲಿದೆ. ಈ ಬಾರಿ ಜಿಲ್ಲೆಯಲ್ಲಿ ಒಟ್ಟು 13,753 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗಳು ಸುಗಮವಾಗಿ ನಡೆಯಲು ಅಗತ್ಯವಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ.
ಜಿಲ್ಲೆಯಲ್ಲಿ ಈ ಬಾರಿ ಎಸೆಸೆಲ್ಸಿ ಪರೀಕ್ಷೆಗಾಗಿ ರೆಗ್ಯೂಲರ್, ಖಾಸಗಿ ಮತ್ತು ಪುನಾರಾವರ್ತಿತರು ಸೇರಿದಂತೆ 7,185 ಬಾಲಕರು ಮತ್ತು 6,568 ಬಾಲಕಿ ಯರು ಸೇರಿದಂತೆ ಒಟ್ಟು 13753 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಬೈಂದೂರಿನಲ್ಲಿ 8, ಕುಂದಾಪುರದಲ್ಲಿ 9, ಕಾರ್ಕಳದಲ್ಲಿ 10, ಬ್ರಹ್ಮಾವರದಲ್ಲಿ 12 ಹಾಗೂ ಉಡುಪಿಯಲ್ಲಿ 16 ಸೇರಿದಂತೆ ಒಟ್ಟು 55 ಕೇಂದ್ರಗಳಲ್ಲಿ, ಪರೀಕ್ಷೆಯ ವೇಳೆ ಯಾವುದೇ ರೀತಿಯ ಅಕ್ರಮಗಳು ನಡೆಯದಂತೆ ಸಿಸಿಟಿವಿಗಳನ್ನು ಅಳವಡಿಸಲಾಗಿದೆ.
ಪರೀಕ್ಷಾ ಕೇಂದ್ರಗಳ ಒಳಗೆ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಿರುವ ಅಧಿಕಾರಿ ಮತ್ತು ಸಿಬ್ಬಂದಿ ಸ್ಮಾರ್ಟ್ವಾಚ್, ಮೊಬೈಲ್ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ತೆಗೆದುಕೊಂಡು ಹೋಗುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಒಳಗೆ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಗಳಾಗದಂತೆ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಎಲ್ಲಾ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಉಚಿತ ಪ್ರಯಾಣ: ಗ್ರಾಮೀಣ ಪ್ರದೇಶದಿಂದ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಗಳಲ್ಲಿ -ಪರೀಕ್ಷಾ ಅವಧಿಯಲ್ಲಿ- ವಾಸಸ್ಥಳದಿಂದ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಮತ್ತು ವಾಪಾಸ್ ಮರಳಲು ಸಾಮಾನ್ಯ ಹಾಗೂವೇಗದೂತ ಬಸ್ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷಾ ಪ್ರವೇಶ ಪತ್ರವನ್ನು ತೋರಿಸಿ, ಉಚಿತವಾಗಿ ಈ ಬಸ್ಗಳಲ್ಲಿ ಪ್ರಯಾಣ ಮಾಡಬಹುದಾಗಿದೆ.
ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ, ಪ್ರಥಮ ಚಿಕಿತ್ಸಾ ಕಿಟ್ನೊಂದಿಗೆ ಆರೋಗ್ಯ ಸಿಬ್ಬಂದಿಯನ್ನು ನಿಯುಕ್ತಿಗೊಳಿಸಲಾಗಿದೆ. ಪೊಲೀಸರ ಭದ್ರತೆಯೊಂದಿಗೆ ಪ್ರಶ್ನೆಪತ್ರಿಕೆ ಬಂಡಲ್ಗಳನ್ನು ಖಜಾನೆ ಯಿಂದ ಪರೀಕ್ಷಾ ಕೇಂದ್ರಗಳಿಗೆ ತರಲಾಗುತ್ತದೆ. ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆ ಸಾಗಾಟ ವಾಹನ, ಪರೀಕ್ಷಾ ಕೇಂದ್ರ ಮತ್ತು ಭದ್ರತಾ ಕೊಠಡಿಗಳಿಗೂ ಪೊಲೀಸ್ ಭದ್ರತೆ ಇರುತ್ತದೆ.
ನಿಷೇಧಾಜ್ಞೆ: ಮಾ.31ರಿಂದ ಎ.15ರವರೆಗೆ ಈ ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಗಳು ನಡೆಯುವ 55 ಪರೀಕ್ಷಾ ಕೇಂದ್ರಗಳಲ್ಲಿ, ಪರೀಕ್ಷೆಗಳು ಸುಸೂತ್ರ ವಾಗಿ ಹಾಗೂ ದೋಷ ರಹಿತವಾಗಿ ನಡೆಯಲು ಹಾಗೂ ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, 144(1)ರಂತೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಕೂರ್ಮಾರಾವ್ ಎಂ ಆದೇಶ ಹೊರಡಿಸಿದ್ದಾರೆ.