ತಂದೆ ಸಾವಿನ ನಂತರ ಆತ್ಮಹತ್ಯೆ ಮನಃಸ್ಥಿತಿ ಉಂಟಾದಾಗ ರಾಹುಲ್ ಗಾಂಧಿ ನೀಡಿದ ಭಾವನಾತ್ಮಕ ಬೆಂಬಲ ಸ್ಮರಿಸಿದ ನಟಿ ರಮ್ಯಾ

ಹೊಸದಿಲ್ಲಿ: ತಂದೆಯ ಸಾವಿನ ನಂತರ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಮನಃಸ್ಥಿತಿ ತಮ್ಮದಾದಾಗ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಭಾವನಾತ್ಮಕವಾಗಿ ತಮ್ಮನ್ನು ಬೆಂಬಲಿಸಿದ್ದರು ಹಾಗೂ ಸಹಾಯ ಮಾಡಿದ್ದರು ಎಂಬುದನ್ನು ರಮ್ಯಾ (Ramya) ಎಂದೇ ಖ್ಯಾತಿ ಪಡೆದಿರುವ ಕನ್ನಡ ನಟಿ ಹಾಗೂ ಮಾಜಿ ಸಂಸದೆ ದಿವ್ಯ ಸ್ಪಂದನ (Divya Spandana) ಅವರು ಜನಪ್ರಿಯ ಕನ್ನಡ ಶೋ ವೀಕೆಂಡ್ ವಿದ್ ರಮೇಶ್‌ನ ಸೀಸನ್ 5 ಕಾರ್ಯಕ್ರಮದಲ್ಲಿ ನೆನಪಿಸಿಕೊಂಡಿದ್ದಾರೆ.
"ತಂದೆಯನ್ನು ಕಳೆದುಕೊಂಡು ಎರಡು ವಾರಗಳಾದ ನಂತರ ನಾನು ಸಂಸತ್ತಿನಲ್ಲಿದ್ದೆ. ನನಗೆ ಯಾರೂ ಹಾಗೂ ಏನೂ ತಿಳಿದಿರಲಿಲ್ಲ, ಸಂಸತ್ತಿನ ಕಲಾಪಗಳ ಬಗ್ಗೆಯೂ ತಿಳಿದಿರಲಿಲ್ಲ," ಎಂದು ಕಾಂಗ್ರೆಸ್ ವಕ್ತಾರೆಯಾಗಿಯೂ ಕಾರ್ಯನಿರ್ವಹಿಸಿರುವ ರಮ್ಯಾ ಹೇಳಿಕೊಂಡರು.
"ಕ್ರಮೇಣ ಎಲ್ಲಾ ವಿಷಯ ತಿಳಿದುಕೊಂಡೆ ಹಾಗೂ ನನ್ನ ಕೆಲಸದಲ್ಲಿ ನನ್ನ ನೋವನ್ನು ಮರೆತೆ, ಮಂಡ್ಯದ ಜನರು ನನ್ನಲ್ಲಿ ಆತ್ಮವಿಶ್ವಾಸ ಮೂಡಿಸಿದರು ಎಂದು ರಮ್ಯಾ ಹೇಳಿದರು.
"ನನ್ನ ಜೀವನದಲ್ಲಿ ನನ್ನ ಮೇಲೆ ಅತ್ಯಂತ ಹೆಚ್ಚು ಪ್ರಭಾವ ಬೀರಿದವರು ನನ್ನ ತಾಯಿ, ನಂತರ ನನ್ನ ತಂದೆ, ಮೂರನೆಯವರು ರಾಹುಲ್ ಗಾಂಧಿ," ಎಂದು ರಮ್ಯ ಹೇಳಿಕೊಂಡರು.