ಟೋಲ್ ದರ ಏರಿಕೆ: ಚುನಾವಣೆಯಲ್ಲಿ ಉತ್ತರಿಸಲು ಜನತೆಗೆ ಹೋರಾಟ ಸಮಿತಿ ಮನವಿ
ಮಂಗಳೂರು, ಮಾ.31: ಜನತೆಯ ವಿರೋಧದ ಹೊರತಾಗಿಯೂ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಟೋಲ್ ದರವನ್ನು ಶೇ.25 ರಷ್ಟು ಏರಿಕೆ ಮಾಡಿದೆ. ಮೊದಲೇ ದಿನಬಳಕೆಯ ಸಾಮಗ್ರಿಗಳ, ಅಡುಗೆ ಅನಿಲದ ದರ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರ ಗಾಯದ ಮೇಲೆ ಇದು ಬರೆ ಎಳೆದಂತಾಗಿದೆ. ಹೆದ್ದಾರಿ ಗುತ್ತಿಗೆಗಳನ್ನು ವಹಿಸಿಕೊಂಡಿರುವ ಬೃಹತ್ ಕಂಪೆನಿಗಳ ಪರವಾದ ನಿರ್ಲಜ್ಜ ಸುಲಿಗೆ ಇದಾಗಿದೆ. ಈ ಹೆದ್ದಾರಿ ಸುಲಿಗೆಗೆ ಮುಂದಿನ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದು ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಮನವಿ ಮಾಡಿದ್ದಾರೆ.
ಬೆಂಗಳೂರು, ಮೈಸೂರು ಎಕ್ಸ್ಪ್ರೆಸ್ ವೇ ಮಾತ್ರವಲ್ಲದೆ ರಾಜ್ಯಾದ್ಯಂತ ಎಲ್ಲಾ ಟೋಲ್ಗೇಟ್ಗಳಲ್ಲೂ ಸುಮಾರು ಶೇ.25ರಷ್ಟು ದರ ಹೆಚ್ಚಿಸಲಾಗಿದೆ. ದ.ಕ., ಉಡುಪಿ ಜಿಲ್ಲೆಯಲ್ಲಿರುವ ಐದು ಟೋಲ್ಗೇಟ್ಗಳಲ್ಲಿಯೂ ಅತಿ ಹೆಚ್ಚಿನ ಪ್ರಮಾಣದಲ್ಲಿ ದರ ಏರಿಸಲಾಗಿದೆ. ಇದರಿಂದ ಜನತೆ ಇಂದು ಪ್ರಯಾಣಕ್ಕಾಗಿ ಹೆದ್ದಾರಿಗಳನ್ನು ಪ್ರವೇಶಿಸಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನೆ, ಹೋರಾಟದ ಜೊತೆಗೆ ರಾಜಕೀಯ ಪ್ರಜ್ಞಾವಂತಿಕೆ ಪ್ರದರ್ಶಿಸಿ ದರೆ ಮಾತ್ರ ಆಳುವ ಸರಕಾರಗಳಿಗೆ, ರಾಜಕೀಯ ಪಕ್ಷಗಳಿಗೆ ಭಯ ಮೂಡಿಸಲು ಸಾಧ್ಯವಿದೆ ಎಂದು ಹೇಳಿಕೆ ಯಲ್ಲಿ ತಿಳಿಸಿದ್ದಾರೆ.
ಜನರು ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಈ ಸಂದರ್ಭದ ದರ ಏರಿಕೆಗೆ ಪ್ರಬಲವಾದ ಪ್ರತಿರೋಧ ತೋರಿಸ ಲೇಬೇಕಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಮೂಲಕ ಖಾಸಗಿ ಕಂಪೆನಿಗಳ ಲಾಭಕೋರ ತನಕ್ಕಾಗಿ ಜನರ ಹಿತ ಬಲಿಕೊಡುವ ಸರಕಾರಗಳಿಗೆ ಸ್ಪಷ್ಟ ಎಚ್ಚರಿಕೆ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.