ಜಾಮಿಯಾ ಮಸೀದಿ ಕಾರ್ಯದರ್ಶಿ ಮೇಲೆ ಹಲ್ಲೆ ಪ್ರಕರಣ: ಆರೋಪಿಗಳ ಬಂಧನಕ್ಕೆ ಪೊಲೀಸರಿಂದ ನಿರ್ಲಕ್ಷ್ಯದ ಆರೋಪ
ಚಿಕ್ಕಮಗಳೂರು: ಇತ್ತೀಚೆಗೆ ನಗರದ ಕೋಟೆ ಬಡಾವಣೆಯ ಚನ್ನಪುರ ರಸ್ತೆಯಲ್ಲಿರುವ ಹಝರತ್ ಸೈಯದ್ ರೋಮ್ ಅಲಿ ಶಾ ಖಾದ್ರಿ ದರ್ಗಾದ ಆವರಣದಲ್ಲಿ ಕೆಲ ಸಂಘಟನೆಗಳ ಮುಖಂಡರು ಗಲಾಟೆ ಮಾಡಿ ಜಾಮಿಯಾ ಮಸೀದಿಯ ಕಾರ್ಯದರ್ಶಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರೂ ಪೊಲೀಸರು ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಜಾಮಿಯ ಮಸೀದಿ ಅಧ್ಯಕ್ಷ ಝಮೀರ್ ಅಹ್ಮದ್ ಆರೋಪಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋಟೆ ಬಡಾವಣೆಯಲ್ಲಿರುವ ಹಜರತ್ ಸೈಯದ್ ರೋಮ್ ಅಲಿ ಶಾ ಖಾದ್ರಿ ದರ್ಗಾದ ಆವರಣದಲ್ಲಿರುವ ಗೋರಿಯ ಸುತ್ತಲು ಇದ್ದ ಗ್ರಿಲ್‌ಗಳು ಶಿಥಿಲಾವಸ್ಥೆಗೆ ತಲುಪಿದ್ದರಿಂದ ಈ ಗ್ರಿಲ್‌ಗಳನ್ನು ಬದಲಾಯಿಸುವ ಕೆಲಸವನ್ನು ಇತ್ತೀಚೆಗೆ ಕೈಗೊಳ್ಳಲಾಗಿತ್ತು. ಇದರ ಹೊರತಾಗಿ ಅಲ್ಲಿ ಯಾವುದೇ ಹೊಸ ಕಾಮಗಾರಿಗಳನ್ನು ಕೈಗೊಂಡಿರಲಿಲ್ಲ. ಆದರೆ, ಸಂಘಪರಿವಾರದ ಕೆಲ ಮುಖಂಡರು ಹಾಗೂ ನಗರಸಭೆ ಸದಸ್ಯ ಮಧುಕುಮಾರ್ ರಾಜ್ ಅರಸ್ ಎಂಬವರು ಆವರಣಕ್ಕೆ ಅತಿಕ್ರಮ ಪ್ರವೇಶ ಮಾಡಿ ಅನುಮಿತಿ ಇಲ್ಲದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಆರೋಪಿಸಿ ಅಲ್ಲಿದ್ದ ಮುಜಾವರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆಗೂ ಯತ್ನಿಸಿ ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ. ಈ ಸುದ್ದಿ ತಿಳಿದ ಜಾಮಿಯಾ ಮಸೀದಿ ಕಾರ್ಯದರ್ಶಿ ಮುದಾಸಿರ್ ಪಾಷ ಎಂಬವರು ಕೂಡಲೇ ಸ್ಥಳಕ್ಕೆ ಹೋಗಿದ್ದು, ಈ ವೇಳೆ ಕೆಲವರು ಗ್ರಿಲ್‌ಗಳನ್ನು ಕೀಳಲು ಪ್ರಯತ್ನಿಸಿದ್ದಾರೆ. ಇದನ್ನು ತಡೆಯಲು ಮುಂದಾಗಿದ್ದಕ್ಕೆ ಸ್ಥಳದಲ್ಲಿದ್ದವರು ಮುದಾಸಿರ್ ಪಾಷ ಅವರ ಮೇಲೆ ಕಲ್ಲಿನಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ ಎಂದರು.
ಹಲ್ಲೆಗೊಳಗಾದ ಮುದಾಸಿರ್ ಪಾಶ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದರೂ ಆರೋಪಿಗಳನ್ನು ಇದುವರೆಗೆ ಬಂಧಿಸಿಲ್ಲ. ಆರೋಪಿಗಳ ವಿರುದ್ಧ ಸಾಮಾನ್ಯ ಸೆಕ್ಷನ್ ಹಾಕಿ ರಾಜಾರೋಷವಾಗಿ ತಿರುಗಾಡಲು ಬಿಟ್ಟಿದ್ದಾರೆ. ಅಲ್ಲದೆ ಈ ಘಟನೆ ಸಂಬಂಧ ಪೊಲೀಸರು ಆರೋಪಿಗಳೊಂದಿಗೆ ಮುಸ್ಲಿಮ್ ಸಮುದಾಯದ ಮುಖಂಡರನ್ನೂ ಕರೆಸಿ ಎಸ್ಪಿ ಕಚೇರಿಯಲ್ಲಿ ಶಾಂತಿ ಸಭೆ ನಡೆಸಿ ಪ್ರಕರಣ ಮುಚ್ಚಿ ಹಾಕಲು ಪ್ರಯತ್ನಿಸಿದ್ದಾರೆ ಎಂದ ದೂರಿದ ಝಮೀರ್, ಹಲ್ಲೆ ಮಾಡಿರುವ ಹಾಗೂ ನಗರದಲ್ಲಿ ಕೋಮುಗಲಭೆ ಸೃಷ್ಟಿಸಲು ಮುಂದಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಹಲ್ಲೆಗೊಳಗಾಗಿದ್ದ ಜಾಮಿಯ ಮಸೀದಿ ಕಾರ್ಯದರ್ಶಿ ಮುದಾಸಿರ್ ಪಾಶ ಮಾತನಾಡಿ, ಕೋಟೆ ದರ್ಗಾಕ್ಕೆ ಸಂಬಂಧಿಸಿದಂತೆ ಕೆಲವರು ಅಪಪ್ರಚಾರ ಮಾಡಿದ್ದಾರೆ. ದರ್ಗಾ ಜಾಗ ಸಂಬಂಧ ಯಾವುದೇ ವಿವಾದ ಇಲ್ಲದಿದ್ದರೂ ಕೆಲವರು 1996ರಿಂದಲೂ ದರ್ಗಾದ ವಿವಾದ ನ್ಯಾಯಾಲಯದಲ್ಲಿದೆ ಎಂದು ಸುಳ್ಳು ಪ್ರಚಾರ ಮಾಡಿದ್ದಾರೆ. ಈ ದರ್ಗಾಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿಲ್ಲ. ದರ್ಗಾಕ್ಕೆ ಸಂಬಂಧಿಸಿದ ಎಲ್ಲ ದಾಖಲಾತಿಗಳೂ ವಕ್ಫ್ ಬೋರ್ಡ್ ಬಳಿ ಇದೆ. ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಕೋಮುಗಲಭೆ ಸೃಷ್ಟಿಸಲು ಹುನ್ನಾರ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಫ್ಝಲ್‌ಖಾನ್, ಇರ್ಫಾನ್ ಅಹ್ಮದ್, ಇಬ್ರಾಹೀಮ್, ಅಫ್ಸರ್ ಅಹ್ಮದ್ ಉಪಸ್ಥಿತರಿದ್ದರು.