ಜೆಡಿಎಸ್ ಶಾಸಕನ ವಿರುದ್ಧ ಪೋಸ್ಟ್ ಆರೋಪ: ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
ಮಂಡ್ಯ: ಮಳವಳ್ಳಿ ಕ್ಷೇತ್ರದ ಶಾಸಕ ಡಾ.ಅನ್ನದಾನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆಂದು ಆರೋಪಿಸಿ ವ್ಯಕ್ತಿಯೊಬ್ಬರ ಮೇಲೆ ಶಾಸಕರ ಸಂಬಂಧಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿರುವುದು ವರದಿಯಾಗಿದೆ.
ಮಳವಳ್ಳಿ ತಾಲೂಕಿನ ಕೆಂಭೂತಗೆರೆ ಗ್ರಾಮದ ರಾಮಣ್ಣ ಎಂಬಾತನ ಮೇಲೆ ಗುರುವಾರ ತಡರಾತ್ರಿ 9 ಗಂಟೆ ಸಮಯದಲ್ಲಿ ಶಾಸಕ ಅನ್ನದಾನಿ ಸಂಬಂಧಿಕ ಕೆ.ಪಿ. ಬಸವರಾಜ್ ಹಾಗೂ ಆತನ ಸಹೋದರ ಕೆ.ಪಿ.ಉಮೇಶ್ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ರಾಮಣ್ಣನ ತಲೆ ಹಾಗೂ ಕಿವಿಯ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳವಳ್ಳಿಯಲ್ಲಿ ಓಎಫ್ ಸಿ ಕೇಬಲ್ ಅಳವಡಿಸುವ ವಿಚಾರವಾಗಿ ಶಾಸಕ ಅನ್ನದಾನಿ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಮಣ್ಣ ಪೋಸ್ಟ್ ಹಾಕಿದ್ದರೆನ್ನಲಾಗಿದ್ದು, ಈ ಬಗ್ಗೆ ಶಾಸಕ ಅನ್ನದಾನಿ ಈ ಸಂಬಂಧಿಕ ಹಾಗೂ ಆತನ ಸಹೋದರ 'ಯಾಕೆ ಪೋಸ್ಟ್ ಹಾಕಿದ್ದೀಯಾ' ಎಂದು ರಾಮಣ್ಣನನ್ನು ಅವಾಚ್ಯ ಶಬ್ದಗಳಿಂದ ಬೈದು ಆತನ ಮನೆಗೆ ನುಗ್ಗಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಬಸವರಾಜನನ್ನು ಬಂಧಿಸಿರುವ ಪೊಲೀಸರು ಆತನ ಸಹೋದರನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.