ಕೊಡಗು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 5ನೇ ದಿನಕ್ಕೆ ಕಾಲಿಟ್ಟ ಅಹೋರಾತ್ರಿ ಧರಣಿ
ಪಾಲೇಮಾಡು ನಿವಾಸಿಗಳಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮಡಿಕೇರಿ: ನಿವೇಶನ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಾಲೇಮಾಡು ನಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ.
ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಲೇಮಾಡು ಅಂಗನವಾಡಿ ಕೇಂದ್ರದ ಸಮೀಪದಲ್ಲಿ ಹೋರಾಟ ನಡೆಸುತ್ತಿರುವವರ ಬೇಡಿಕೆಗಳನ್ನು ಈಡೇರಿಸದಿದ್ದರೆ 2023ರ ವಿಧಾನ ಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ರಾಜ್ಯ ಸರ್ಕಾರವು ಉದ್ಯಮಿಗಳಿಗೆ ನೂರಾರು ಎಕರೆ ಸರಕಾರಿ ಜಾಗವನ್ನು ಹಾಗೂ ಶ್ರೀಮಂತ ಭೂಮಾಲೀಕರಿಗೆ ಅವರ ಪಿತ್ರಾರ್ಜಿತ ಆಸ್ತಿ ಎಷ್ಟೇ ಇದ್ದರೂ, ಸರಕಾರಿ ಜಾಗವನ್ನು ಕಬಳಸಿ ಸ್ವಾಧೀನ ಪಡಿಸಿಕೊಂಡಿರುವ ಭೂಮಾಲೀಕರಿಗೆ 30 ವರ್ಷ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡಲು ಮುಂದಾಗಿದ್ದು, ಬಡವರು ತಲೆಯ ಮೇಲೆ ಒಂದು ಸೂರಿಗಾಗಿ 94, 94ಸಿ ಯಡಿ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಅಲ್ಲದೇ 53, 57, ನಮೂನೆಯಲ್ಲಿ ಅರ್ಜಿ ಸಲ್ಲಿಸಿದರೂ ಅಕ್ರಮ ಸಕ್ರಮದಡಿ, ಅರ್ಜಿ ತಿರಸ್ಕೃತವಾಗುತ್ತಿರುವುದು ಕಂಡುಬಂದಿರುತ್ತದೆ. ಸರ್ಕಾರವು ಬಡವರಿಗೊಂದು, ಭೂಕಬಳಿಯ ಭೂಕಳ್ಳರಿಗೊಂದು ನ್ಯಾಯ ಕೊಡುತ್ತಿದ್ದು ಇದು ಸರಕಾರದ ಮಲತಾಯಿ ಧೋರಣೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಖುದ್ದಾಗಿ ಪಾಲೇಮಾಡು ಕಾನ್ಸಿರಾಂ ನಗರಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆ ಹರಿಸಬೇಕು. ಪಾಲೇಮಾಡು ಕಾನ್ಸಿರಾಂ ನಗರದಲ್ಲಿ ವಾಸವಿರುವ ಬಡವರಿಗೆ ವಿತರಿಸಿದ ಹಕ್ಕು ಪತ್ರದಲ್ಲಿ 0.1/2 ಸೆಂಟು ಹಾಗೂ 0.1ಸೆಂಟು ಜಾಗ ಕೊಡಲಾಗಿದ್ದು, ಹಕ್ಕು ಪತ್ರವನ್ನು ತಿದ್ದುಪಡಿಸಿ ವಿಶೇಷ ಯೋಜನೆ ಎಂದು ಪರಿಗಣಿಸಿ ಕನಿಷ್ಟ 3, 3/4 ಕ್ಕೆ ನಿಗದಿಪಡಿಸಬೇಕು. ಪಾಲೆಮಾಡು ಕಾನ್ಸಿರಾಂ ನಗರದ ಬಡವರು ನಮೂನೆ 57ರಲ್ಲಿ ಸಲ್ಲಿಸಿದ ಅರ್ಜಿಯನ್ನು ವಿಶೇಷ ಯೋಜನೆ ಎಂದು ಪರಿಗಣಿಸಿ ಬಡವರು ಬಳಸಿಕೊಂಡು ಸ್ವಾಧೀನಪಡಿಸಿಕೊಂಡ ಕನಿಷ್ಠ 0.05 ರಿಂದ 0.01ಜಾಗಕ್ಕೆ ಅಕ್ರಮ ಸಕ್ರಮದಡಿ ಈ ಕೂಡಲೇ ಮಂಜೂರಾತಿ ನೀಡಿ ಆರ್‌ಟಿಸಿಯಲ್ಲಿ ನಮೂದಿಸಬೇಕು. ಕಾನ್ಸಿರಾಂ ನಗರದಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಗಂಡ ಕುಟುಂಬಗಳು ಶೇ 65 ರಷ್ಟಿದ್ದು, ಸಮಾಜ ಕಲ್ಯಾಣ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಅಂಬೇಡ್ಕರ್ ಭವನ, ಕಾಂಕ್ರೀಟ್ ರಸ್ತೆ, ಚರಂಡಿ ಸೇರಿದಂತೆ ಅಭಿವೃದ್ಧಿ ಕೆಲಸಕ್ಕೆ ಅನುದಾನ ವಿನಿಯೋಗಿಸಬೇಕು ಇಲ್ಲದಿದ್ದಲ್ಲಿ 2023 ರ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಪಾಲೇಮಾಡು ನಿವಾಸಿಗಳು ಮಾರ್ಚ್ 17 ರಂದು ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾಡಳಿತದಿಂದ ಯಾವುದೇ ಸ್ಪಂದನೆ ಲಭಿಸಿಲ್ಲ ಎಂದು ಆರೋಪಿಸಿರುವ ಹೋರಾಟಗಾರರು ಕಳೆದ ಐದು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.






.jpeg)



