ಚುನಾವಣೆಯನ್ನು ಲಘುವಾಗಿ ಪರಿಗಣಿಸಬೇಡಿ: JDS ಅಭ್ಯರ್ಥಿಗಳಿಗೆ ಕುಮಾರಸ್ವಾಮಿ ಸೂಚನೆ
ಬೆಂಗಳೂರು, ಎ. 1: ‘ರಾಜ್ಯ ವಿಧಾನಸಭಾ ಚುನಾವಣೆಯನ್ನು ಯಾವೊಬ್ಬ ಅಭ್ಯರ್ಥಿಯೂ ಲಘುವಾಗಿ ಪರಿಗಣಿಸಬಾರದು ಹಾಗೂ ಗೆಲುವಿನ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬೇಡಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಗಳಿಗೆ ಸಲಹೆ ನೀಡಿದ್ದಾರೆ.
ಶನಿವಾರ ಚುನಾವಣೆ ಸಿದ್ಧತೆಯ ಭಾಗವಾಗಿ ಪಕ್ಷದ ಎಲ್ಲ ಶಾಸಕರು, ಅಭ್ಯರ್ಥಿಗಳಿಗೆ ಆನ್‍ಲೈನ್ ವೇದಿಕೆಯ ಮೂಲಕ ಸಮಾಲೋಚನೆ ನಡೆಸಿದ ಅವರು, ‘ಪಕ್ಷದ ಕಚೇರಿಯಿಂದ ಬರುವ ಸೂಚನೆಗಳನ್ನು ಪಾಲಿಸಲು ಸೂಚನೆ ನೀಡಿದ ಮಾಜಿ ಮುಖ್ಯಮಂತ್ರಿ, ಮತದಾನಕ್ಕೆ ಇನ್ನೂ 37 ದಿನ ಇದೇ, ಇದು ನಿಮಗೆಲ್ಲ ಅಗ್ನಿಪರೀಕ್ಷೆ. ಕ್ಷೇತ್ರದಲ್ಲಿ ಏನಾದರೂ ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಿ. ಕಾರ್ಯಕರ್ತರು, ಮುಖಂಡರನ್ನು ಒಟ್ಟಿಗೆ ಕರೆದುಕೊಂಡು ಹೋಗಿ’ ಎಂದು ಸೂಚಿಸಿದರು.
‘ಪಂಚರತ್ನ ರಥಯಾತ್ರೆ ಯಶಸ್ವಿ ಆಗಿದೆ. ಮೈಸೂರಿನಲ್ಲಿ ಸಮಾರೋಪ ಸಮಾವೇಶ ಯಶಸ್ವಿ ಆಗಿದೆ. ಪಂಚರತ್ನ ಯೋಜನೆಗಳನ್ನು ಮನೆ ಮನೆಗೂ ತೆಗೆದುಕೊಂಡು ಹೋಗಿ. ಯೋಜನೆಗಳ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡಿ’ ಎಂದು ಕುಮಾರಸ್ವಾಮಿ, ಪಕ್ಷದ ಶಾಸಕರು ಹಾಗೂ ಅಭ್ಯರ್ಥಿಗಳಿಗೆ ಸಲಹೆ ನೀಡಿದರು.