ಐಪಿಎಲ್: ಡಿಎಲ್‌ಎಸ್ ನಿಯಮದಡಿ ಕೆಕೆಆರ್‌ಗೆ ಸೋಲುಣಿಸಿದ ಪಂಜಾಬ್ ಕಿಂಗ್ಸ್

ಮೊಹಾಲಿ,ಎ.1: ಪಂಜಾಬ್ ಕಿಂಗ್ಸ್ ತಂಡ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಡಿಎಲ್‌ಎಸ್ ನಿಯಮದ ಪ್ರಕಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 7 ರನ್‌ನಿಂದ ಗೆಲುವು ದಾಖಲಿಸಿದೆ.
ಗೆಲ್ಲಲು 192 ರನ್ ಗುರಿ ಬೆನ್ನಟ್ಟಿದ ಕೋಲ್ಕತಾ ತಂಡ 16 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿತ್ತು. ಆಗ ಮಳೆ ಆಗಮಿಸಿ ಪಂದ್ಯವನ್ನು ಸ್ಥಗಿತಗೊಳಿಸಿತು. ಈ ವೇಳೆ ಪಂಜಾಬ್ ತಂಡ ಡಿಎಲ್‌ಎಸ್ ನಿಯಮದ ಪ್ರಕಾರ 7 ರನ್‌ನಿಂದ ಮುನ್ನಡೆಯಲ್ಲಿದ್ದ ಕಾರಣ ಗೆಲುವು ತನ್ನದಾಗಿಸಿಕೊಂಡಿತು.
ಕೆಕೆಆರ್ ಪರ ಆ್ಯಂಡ್ರೆ ರಸೆಲ್(35 ರನ್, 19 ಎಸೆತ), ವೆಂಕಟೇಶ್ ಅಯ್ಯರ್(34 ರನ್, 28 ಎಸೆತ), ನಾಯಕ ನಿತಿಶ್ ರಾಣಾ(24 ರನ್, 17 ಎಸೆತ), ಗುರ್ಬಾಝ್(22 ರನ್, 16 ಎಸೆತ)ಎರಡಂಕೆಯ ಸ್ಕೋರ್ ಗಳಿಸಿದರು.
ಪಂಜಾಬ್ ಪರ ವೇಗದ ಬೌಲರ್ ಅರ್ಷದೀಪ್ ಸಿಂಗ್(3-19) ಮೂರು ವಿಕೆಟ್‌ಗಳನ್ನು ಪಡೆದು ಯಶಸ್ವಿ ಪ್ರದರ್ಶನ ನೀಡಿದರು.
*ಪಂಜಾಬ್ 191/5: ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಪಂಜಾಬ್ ತಂಡ ಭಾನುಕ ರಾಜಪಕ್ಸ ಅರ್ಧಶತಕದ(50 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್)ಕೊಡುಗೆಯ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 191 ರನ್ ಗಳಿಸಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಐಪಿಎಲ್‌ನ 2ನೇ ಪಂದ್ಯದ ಗೆಲುವಿಗೆ 192 ರನ್ ಗುರಿ ನೀಡಿದೆ.







