ಮಂಗಳೂರು: ಸರ್ವಿಸ್ ಬಸ್ ನಿಲ್ದಾಣಕ್ಕೆ ಸಿಟಿ ಬಸ್‌ಗಳ ಸ್ಥಳಾಂತರ
ಮೊದಲ ದಿನವೇ ಸರಣಿ ಅಪಘಾತ

ಮಂಗಳೂರು: ನಗರದ ಹ್ಯಾಮಿಲ್ಟನ್ ಸರ್ಕಲ್‌ನ ಸ್ಟೇಟ್‌ಬ್ಯಾಂಕ್-ಸಿಟಿ ಬಸ್ ನಿಲ್ದಾಣದಲ್ಲಿ ಶನಿವಾರದಿಂದ ಬಸ್ ನಿಲುಗಡೆ ಮತ್ತು ಸಂಚಾರವನ್ನು ನಿಷೇಧಿಸಲಾಗಿದೆ. ಹಾಗಾಗಿ ಎಲ್ಲಾ ಸಿಟಿ ಬಸ್‌ಗಳು ಸರ್ವಿಸ್ ಬಸ್ ನಿಲ್ದಾಣದಿಂದಲೇ ಸಂಚಾರ ಆರಂಭಿಸಿವೆ.
ಸ್ಟೇಟ್‌ಬ್ಯಾಂಕ್ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಯಾಗುತ್ತಲೇ ದ್ವಿಚಕ್ರ ವಾಹನ ಸವಾರರು ಅಮಿತ ವೇಗದಲ್ಲಿ ಸವಾರಿ ಮಾಡಿದ ಪರಿಣಾಮ ಮೊದಲ ದಿನವೇ 2 ಪ್ರತ್ಯೇಕ ಅಪಘಾತಗಳು ಸಂಭವಿಸಿದ್ದು, ಸವಾರರಿಗೆ ಅಲ್ಪ ಪ್ರಮಾಣದ ಗಾಯಗಳಾಗಿವೆ.
ನಗರದ ಹ್ಯಾಮಿಲ್ಟನ್ ಸರ್ಕಲ್‌ನಿಂದ ರಾವ್ ಆ್ಯಂಡ್ ರಾವ್ ಸರ್ಕಲ್‌ವರೆಗೆ ಯಾವುದೇ ಬಸ್‌ಗಳ ನಿಲುಗಡೆ ಅಥವಾ ಸಂಚಾರಕ್ಕೆ ಅವಕಾಶ ಇಲ್ಲ. ಅಲ್ಲದೆ ನಗರ ಪೊಲೀಸ್ ಆಯುಕ್ತರ ಕಚೇರಿ ಎದುರಿನ ರಸ್ತೆಯಿಂದ ಸರ್ವಿಸ್ ಬಸ್ ನಿಲ್ದಾಣ ಪಕ್ಕದ ರಸ್ತೆಯಲ್ಲಿ ಖಾಸಗಿ ವಾಹನಗಳ ಸಂಚಾರಕ್ಕೂ ಅವಕಾಶ ಇರುವುದಿಲ್ಲ ಎಂದು ಸಂಚಾರ ಠಾಣೆಯ ಹಿರಿಯ ಅಧಿಕಾರಿಗಳು ಹೊಸ ನಿಯಮಾವಳಿ ರೂಪಿಸಿ ಎ.1ರಿಂದ ಜಾರಿಗೊಳಿಸಲು ಮುಂದಾಗಿದ್ದರು.
ಸಂಚಾರ ದಟ್ಟಣೆ ಕಡಿಮೆ ಮಾಡುವ ಸಲುವಾಗಿ ಪೊಲೀಸರು ಹೊರ ನಿಯಮಾವಳಿ ರೂಪಿಸಿದರೂ ಸಾಕಷ್ಟು ಮುನ್ಸೂಚನೆ ನೀಡದ ಕಾರಣ ಮೊದಲ ದಿನವೇ ಸಮಸ್ಯೆ, ಗೊಂದಲ ಸೃಷ್ಟಿಯಾಗಿದೆ. ಪೊಲೀಸರು ಏಕಾಏಕಿ ಈ ಹೊಸ ನಿಯಮಾವಳಿ ರೂಪಿಸಿದ ಕಾರಣ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿವೆ. ಹಿರಿಯ ನಾಗರಿಕರಿಗೆ ಸಿಟಿ ಬಸ್ ನಿಲ್ದಾಣದಿಂದ ಸರ್ವಿಸ್ ಬಸ್ ನಿಲ್ದಾಣದವರೆಗೂ ನಡೆದಾಡಲು ಕಷ್ಟವಾಗುತ್ತಿದೆ. ಸ್ಟೇಟ್‌ಬ್ಯಾಂಕ್ ಪರಿಸರದ ರಸ್ತೆಗಳು ಕೂಡ ಖಾಲಿಯಾಗಿದೆ. ಬೈಕ್ ಸವಾರರು ಅಮಿತ ವೇಗದಿಂದ ಈ ರಸ್ತೆಯಲ್ಲಿ ಚಲಾಯಿಸಿದ ಪರಿಣಾಮ ಮೊದಲ ದಿನವೇ 2 ಅಪಘಾತಗಳು ಸಂಭವಿಸಿವೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯವಾಗಿದ್ದು, ಅವರಿಗೆ ಸರಿಯಾಗಿ ಶಾಲೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಸರ್ವಿಸ್ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಇತ್ತೀಚೆಗೆ ನಡೆದಿದ್ದು, ಈಗ ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ಪೊಲೀಸರು ಸರ್ವಿಸ್ ಮತ್ತು ಸಿಟಿ ಬಸ್‌ಗಳಿಗೆ ಒಂದೇ ನಿಲ್ದಾಣದಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದರ ಸಾಧಕ-ಬಾಧಕಗಳ ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಯಬಹುದಾಗಿದೆ. ನಾವು ಅಲ್ಪ ಬಂಡವಾಳವನ್ನು ಹಾಕಿ ಹಣ್ಣು ವ್ಯಾಪಾರವನ್ನು ನಡೆಸುತ್ತಿದ್ದೇವೆ. ಸಿಟಿ ಬಸ್ ನಿಲ್ದಾಣದ ಈ ಬದಲಾವಣೆಯಿಂದ ನಮ್ಮ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ ಎಂದು ಹಣ್ಣು ಹಂಪಲು ವ್ಯಾಪಾರಿ ಮುಹಮ್ಮದ್ ಸಲೀಂ ಅಭಿಪ್ರಾಯಪಟ್ಟಿದ್ದಾರೆ.
ಸಿಟಿ ಬಸ್‌ಗಳು ಸರ್ವಿಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ ಕಾರಣ ರಿಕ್ಷಾ ಬಾಡಿಗೆಗೆ ಜನ ಇಲ್ಲದಂತಾಗಿದೆ. ಇಡೀ ರಸ್ತೆ ಖಾಲಿಯಾಗಿದೆ. ಸರಿಯಾದ ಬಾಡಿಗೆ ಇಲ್ಲ. ಬೆಳಗ್ಗೆಯಿಂದ ನಿಂತ ಸ್ಥಳದಲ್ಲೇ ಇದ್ದೇವೆ ಎಂದು ರಿಕ್ಷಾ ಚಾಲಕರೊಬ್ಬರು ತಿಳಿಸಿದ್ದಾರೆ.
ನಮಗೆ ಬಸ್ ನಿಲ್ಲಿಸಲು ಸರಿಯಾದ ವ್ಯವಸ್ಥೆ ಮಾಡಿಲ್ಲ. ಬಸ್‌ಗಳು ಬಂದು ಅಡ್ಡಾದಿಡ್ಡಿ ನಿಲ್ಲುತ್ತಿವೆ. ಇದರಿಂದ ಬಸ್ ಸರಿಯಾದ ಸಮಯದಲ್ಲಿ ಹೊರಡಲು ಸಾಧ್ಯವಾಗುತ್ತಿಲ್ಲ. ಬಸ್‌ನಲ್ಲಿ ಪ್ರಯಾಣಿಸುವವರ ಜನಸಂಖ್ಯೆಯೂ ಕಡಿಮೆಯಿದೆ. ಸರ್ವಿಸ್ ಬಸ್ ನಿಲ್ದಾಣಕ್ಕೆ ಶೀಟ್ ಹಾಕದಿರುವುದರಿಂದ ಜನರು ಬಿಸಿಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಿಟಿ ಬಸ್ಸೊಂದರ ಚಾಲಕ ಸುರೇಶ್ ಎಂಬವರು ತಿಳಿಸಿದ್ದಾರೆ.
ಮೊದಲು ಇದ್ದ ಜಾಗದಲ್ಲಿಯೇ ಸಿಟಿ ಬಸ್ ನಿಲ್ದಾಣ ಇದ್ದಿದರೆ ಒಳ್ಳೆಯದಿತ್ತು. ದಿನಸಿ ಸಾಮಾಗ್ರಿಗಳನ್ನು ಹೊತ್ತುಕೊಂಡು ಸರ್ವಿಸ್ ಬಸ್ ನಿಲ್ದಾಣಕ್ಕೆ ಬರಲು ಕಷ್ಟವಾಗುತ್ತಿದೆ ಎಂದು ಉಮಾವತಿ ಎಂಬ ವೃದ್ಧೆ ಅಳಲು ತೋಡಿಕೊಂಡರು.
ಒಟ್ಟಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಸರ್ವಿಸ್ ಬಸ್ ನಿಲ್ದಾಣಕ್ಕೆ ಸಿಟಿ ಬಸ್‌ಗಳನ್ನು ಸ್ಥಳಾಂತರಿಸಿರುವುದಕ್ಕೆ ಪ್ರಯಾಣಿಕರಿಂದ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.