ಮಂಗಳೂರು:ಸಿಎಸ್‌ಐ ಬಿಷಪ್ ಹೌಸ್ಎದುರು ಪ್ರತಿಭಟನೆ

ಮಂಗಳೂರು : ನಗರದ ಸೈಂಟ್ ಪಾಲ್ ಚರ್ಚ್‌ನ ಧರ್ಮಗುರು ನೋಯಲ್ ಕರ್ಕಡ ವಿರುದ್ಧ ಮಹಿಳೆಯೊಬ್ಬರು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರಲ್ಲದೆ, ನ್ಯಾಯಕ್ಕಾಗಿ ಸಿಎಸ್‌ಐ ಬಿಷಪ್ ಹೌಸ್ (ಬಲ್ಮಠದ ಶಾಂತಿ ಕೆಥಡ್ರಲ್) ಮುಂದೆ ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
2021ರ ಆಗಸ್ಟ್‌ನಲ್ಲಿ ಧರ್ಮಗುರು ನೋಯಲ್ ಕರ್ಕಡ ಅವರ ಪರಿಚಯವಾಗಿದೆ. ಬಳಿಕ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡಿದ್ದಾರೆ. ಕಳಸ, ಕಾಸರಗೋಡಿಗೆ ಸುತ್ತಾಡಿಸಿದ್ದಾರೆ. ಒಂದು ವರ್ಷದ ಬಳಿಕ ತನ್ನ ಸಂಪರ್ಕ ಕಡಿದುಕೊಂಡು ದೂರ ಮಾಡಿದ್ದಾರೆ ಎಂದು ಉಡುಪಿ ಮೂಲದ ಮಹಿಳೆ ಆರೋಪಿಸಿದ್ದಾರೆ.
ನ್ಯಾಯ ಕೇಳಿದಾಗ ತನಗೆ ಜೀವ ಬೆದರಿಕೆ ಹಾಕಿದ್ದಲ್ಲದೆ ಹಲ್ಲೆಯನ್ನೂ ಮಾಡಿದ್ದಾರೆ. ಪೊಲೀಸರಿಗೆ ದೂರು ಕೊಟ್ಟರೆ ಕೊಲ್ಲುತ್ತೇನೆ ಎಂದು ಬೆದರಿಸಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ವಾಟ್ಸ್‌ಆ್ಯಪ್ ಚಾಟ್‌ಗಳಲ್ಲದೆ ನಾವು ಜೊತೆಗಿದ್ದ ವಿಡಿಯೋಗಳನ್ನು ದಾಖಲೆಯಾಗಿಟ್ಟುಕೊಂಡು ಒಡನಾಡಿ ಸಂಸ್ಥೆಯ ನೆರವು ಪಡೆದು ಪೊಲೀಸರಿಗೆ ದೂರು ನೀಡುವೆ ಎಂದಿದ್ದಾರೆ.
ನೋಯಲ್ ಕರ್ಕಡ ವಿರುದ್ಧ ಇತ್ತೀಚೆಗಷ್ಟೇ ಮಹಿಳೆಯೊಬ್ಬರು ದೂರು ನೀಡಿದ್ದು, ನಗರದ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪ ಕೇಳಿ ಬಂದಿದೆ.