2 ಬಿ ಮೀಸಲಾತಿ ರದ್ದು | ಹೈಕೋರ್ಟ್‍ನಲ್ಲಿ ಪ್ರಶ್ನಿಸಲು ವಿದ್ಯಾರ್ಥಿ ಸಂಘಟನೆ ಸಜ್ಜು
ಬೆಂಗಳೂರು, ಎ.1: ಸರಕಾರವು ಮುಸ್ಲಿಮ್ ಸಮುದಾಯದವರನ್ನು ಹಿಂದುಳಿದ ವರ್ಗದ ಮೀಸಲಾತಿಯಿಂದ ತೆಗೆದುಹಾಕಿ, ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ಮರುಹಂಚಿಕೆ ಮಾಡಿರುವುದನ್ನು ಮುಂದಿನ ವಾರವೇ ಹೈಕೋರ್ಟ್‍ನಲ್ಲಿ ಪ್ರಶ್ನಿಸಲಾಗುವುದು ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘ(ಐಸಾ) ತಿಳಿಸಿದೆ.
ಶನಿವಾರ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸಂಘದ ಸದಸ್ಯ ಸಯ್ಯದ್ ಜುನೈದ್, ಮುಸ್ಲಿಮ್ ಸಮುದಾಯವನ್ನು ಹಿಂದುಳಿದ ಪಟ್ಟಿಯಿಂದ ಕೈಬಿಟ್ಟ ರಾಜ್ಯ ಸರಕಾರದ ನಿರ್ಧಾರವು ಸಾಮಾಜಿಕ ನ್ಯಾಯದ ಮೇಲೆ ನಡೆದ ದಾಳಿಯಾಗಿದೆ. ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನದ ಕಡಿತ, ಮೌಲಾನಾ ಆಝಾದ್ ನ್ಯಾಷನಲ್ ಫೆಲೋಶಿಪ್ ಹಿಂಪಡೆಯುವಿಕೆ ಸೇರಿದಂತೆ ಅನೇಕ ವಿಷಯಗಳಲ್ಲಿ ಈಗಾಗಲೇ ಮುಸ್ಲಿಮರನ್ನು ಅಂಚಿಗೆ ದೂಡಿದೆ. ಸಮಾನ ಮತ್ತು ಉತ್ತಮ ಶಿಕ್ಷಣವನ್ನು ಪಡೆಯುವುದರಿಂದ ಮುಸ್ಲಿಮರನ್ನು ವಂಚಿಸಲಾಗುತ್ತಿದೆ ಎಂದರು.
ಪ್ರಗತಿಪರ ಚಿಂತಕಿ ಮತ್ತು ಲೇಖಕಿ ಡಾ.ಕೆ.ಶರೀಫಾ ಮಾತನಾಡಿ, ‘ಮುಸ್ಲಿಮ್ ಸಮುದಾಯಕ್ಕೆ 2ಬಿ ಮೀಸಲಾತಿಯನ್ನು ರದ್ದು ಮಾಡಿರುವ ಸರಕಾರದ ಕ್ರಮ ಅಸಂವಿಧಾನಿಕವಾಗಿದೆ. ಇದು ಮುಸ್ಲಿಮ್ ಸಮುದಾಯದ ಯುವತಿಯರ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಮುಸ್ಲಿಮ್ ಸಮುದಾಯದ ವಿದ್ಯಾರ್ಥಿನಿಯರು ಈಗಾಗಲೇ ಶಿಕ್ಷಣವನ್ನು ಪಡೆಯಲು ಪರದಾಡುತ್ತಿದ್ದು, ಕಷ್ಟಪಟ್ಟು ಐಎಎಸ್, ಕೆಎಎಸ್ ಅಧಿಕಾರಿಗಳಾಗಲು ಮತ್ತು ವೃತ್ತಿಪರರಾಗಲು ಆಕಾಂಕ್ಷೆ ಹೊಂದಿರುತ್ತಾರೆ. ಈಗ ಮುಸಲ್ಮಾನ ಸಮುದಾಯದವರನ್ನು ಇಡಬ್ಲ್ಯೂಎಸ್ ಕೋಟಾದಡಿ ತಂದು ಈ ಮುಸ್ಲಿಮ್ ವಿದ್ಯಾರ್ಥಿನಿಗಳ ಶಿಕ್ಷಣವನ್ನು ಹತ್ತಿಕ್ಕಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಲಾಯರ್ಸ್ ಅಸೋಸಿಯೇಷನ್ ಫಾರ್ ಜಸ್ಟಿಸ್ ರಾಷ್ಟ್ರೀಯ ಅಧ್ಯಕ್ಷೆ ಮತ್ತು ವಕೀಲೆ ಮೈತ್ರೇಯಿ ಕೃಷ್ಣನ್ ಮಾತನಾಡಿ, ‘ಹಾವನೂರು, ಚಿನ್ನಪ್ಪ ರೆಡ್ಡಿ ಮತ್ತು ಸಾಚಾರ್ ಸಮಿತಿ ವರದಿಗಳು ಮೀಸಲಾತಿಯ ಕುರಿತು ವೈಜ್ಞಾನಿಕವಾಗಿ ಶಿಫಾರಸ್ಸುಗಳನ್ನು ನೀಡಿದ್ದವು. ಅದರಂತೆಯೇ ಮುಸ್ಲಿಮ್ ಸಮುದಾಯಕ್ಕೆ 2ಬಿ ವರ್ಗದಡಿ ಮೀಸಲಾತಿಯನ್ನು ನೀಡಲಾಗಿತ್ತು ಎಂದು ಹೇಳಿದರು.
ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯನ್ನು ಆಧರಿಸಿ ಮುಸ್ಲಿವi ಸಮುದಾಯಕ್ಕೆ 2ಬಿ ಮೀಸಲಾತಿ ಕಲ್ಪಿಸಲಾಗಿದೆಯೇ, ಹೊರತು ಧರ್ಮ ಆಧಾರದಲ್ಲಿ ಅಲ್ಲ. ಈಗ ಮುಸ್ಲಿಮ್ ಸಮುದಾಯಕ್ಕೆ ಮೀಸಲಾತಿ ರದ್ದು ಮಾಡಿರುವುದರಿಂದ ಕೇವಲ ಮುಸ್ಲಿಮ್ ಸಮುದಾಯದವರಿಗೆ ಪೆಟ್ಟು ಬೀಳುವುದಲ್ಲ, ಸಂವಿಧಾನದ ಮೇಲಿನ ದಾಳಿಯೂ ಆಗಿದೆ ಎಂದು ಅವರು ಹೇಳಿದರು.
‘ನೂತನ ಶಿಕ್ಷಣ ನೀತಿ 2020 ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಹತ್ತಿಕ್ಕುತ್ತಿದ್ದು, ಸಾಲ-ಆಧಾರಿತ ವ್ಯವಸ್ಥೆಯನ್ನು ತರುತ್ತಿದೆ. 2020ರ ನೀತಿಯ ದಸ್ತಾವೇಜಿನಲ್ಲಿ ‘ಮೀಸಲಾತಿ' ಎಂಬ ಪದವನ್ನು ಬಳಸದೆ, ಸಾಮಾಜಿಕ ನ್ಯಾಯದ ಕುರಿತು ಕಾಳಜಿ ಇಲ್ಲದೆ ಇರುವುದು ತೋರುತ್ತದೆ. ಸಾಮಾಜಿಕ ನ್ಯಾಯದ ಮೇಲೆ ನಡೆಯುವ ದಾಳಿಯ ವಿರುದ್ಧ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಬೇಕಾಗಿದೆ’
-ಸಯ್ಯದ್ ಜುನೈದ್, ಐಸಾ ಸದಸ್ಯ