ಪೊಲೀಸ್ ಕೆಲಸ ಸಮಾಜದಲ್ಲಿ ದೊರೆತ ಜವಾಬ್ದಾರಿ: ಡಿಐಜಿಪಿ ಡಾ.ಚಂದ್ರಗುಪ್ತ

ಮಂಗಳೂರು,ಮಾ.16: ಪೊಲೀಸರು ತಮ್ಮ ಕೆಲಸವನ್ನು ಸರಕಾರಿ ಕೆಲಸವೆಂದು ಭಾವಿಸದೆ ಸಮಾಜದಲ್ಲಿ ಅದೊಂದು ತಮಗೆ ದೊರೆತ ಜವಾಬ್ದಾರಿ ಎಂದು ಪರಿಗಣಿಸಬೇಕು ಎಂದು ಪಶ್ಚಿಮ ವಲಯ ಪೊಲಿಸ್ ಉಪ ಮಹಾನಿರೀಕ್ಷಕ ಡಾ.ಚಂದ್ರಗುಪ್ತ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಪೊಲೀಸ್ ಕಮೀಷನರೇಟ್, ದ.ಕ.ಜಿಲ್ಲಾ ಪೊಲೀಸ್ ಮತ್ತು ಕೆಎಸ್‌ಆರ್‌ಪಿ 7ನೇ ಪಡೆ , ಮಂಗಳೂರು ಘಟಕಗಳ ಆಶ್ರಯದಲ್ಲಿ ರವಿವಾರ ಡಿಎಆರ್ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ಮತ್ತು ಕಲ್ಯಾಣ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ಸಮಾಜದ ಅವಿಭಾಜ್ಯ ಅಂಗವಾಗಿದೆ. ಇದರಿಂದಾಗಿ ಪೊಲೀಸರಿಗೆ ಸಮಾಜದಲ್ಲಿ ಜವಾಬ್ದಾರಿ ಇದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ ಪೊಲೀಸ್ ನಿರೀಕ್ಷಕ ರಾಘವ ಪಡೀಲ್ ಗೌರವ ವಂದನೆ ಸ್ವೀಕರರು. ಈ ಸಂದರ್ಭದಲ್ಲಿ ಮಾತನಾಡಿ 38 ವರ್ಷಗಳ ಸುದೀರ್ಘ ಸೇವೆಯಲ್ಲಿ ಐದು ಜಿಲ್ಲೆಗಳಲ್ಲಿ ದುಡಿದಿರುವೆನು.ಈ ಅವಧಿಯಲ್ಲಿ ಕರ್ತವ್ಯ ಸಮರ್ಪಕವಾಗಿ ನಿರ್ವಹಿಸಿದ ತೃಪ್ತಿ ಇದೆ ಹೇಳಿದರು.
ಪೊಲೀಸರು ಪರಿಸ್ಥಿತಿಗೆ ಹೊಂದಿಕೊಂಡು ಶಿಕ್ಷಣ ಮತ್ತು ಜ್ಞಾನಾಭಿವೃದ್ಧಿಯ ಕಡೆಗೆ ಗಮನ ಹರಿಸಬೇಕು ಎಂದು ಹೇಳಿದರು.
ಈ ವರ್ಷ ನಿವೃತ್ತರಾದ 61 ಮಂದಿ ಪೊಲೀಸರು ಮತ್ತು ಸಿಬ್ಬಂದಿಯನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೆಎಸ್‌ಆರ್ 7ನೇ ಪಡೆಯ ಕಮಾಂಡೆಂಟ್ , ಉಪ ಪೊಲೀಸ್ ಆಯುಕ್ತ ಅಂಶು ಕುಮಾರ್ ಉಪಸ್ಥಿತರಿದ್ದರು.
ನಗರ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್ ಜೈನ್ ಸ್ವಾಗತಿಸಿದರು. ಜಿಲ್ಲಾ ಎಸ್ಪಿ ಡಾ.ವಿಕ್ರಂ ಅಮಟೆ ವರದಿ ವಾಚಿಸಿದರು. ಡಿಸಿಪಿ ದಿನೇಶ್ ಕುಮಾರ್ ವಂದಿಸಿದರು. ಸಿಬ್ಬಂದಿ ಗಜೇಂದ್ರ ಜೆ.ಪಿ ಕಾರ್ಯಕ್ರಮ ನಿರೂಪಿಸಿದರು.














