ಕೋಮುಗಲಭೆ ನಿಯಂತ್ರಿಸಲು ನಿತೀಶ್ ಸರಕಾರ ವಿಫಲ: ಅಮಿತ್ ಶಾ

ಹಿಸುವಾ (ಬಿಹಾರ), ಎ.2: ಬಿಹಾರದ ಸಸಾರಾಮ್ ಹಾಗೂ ಬಿಹಾರಶರೀಫ್ ಪಟ್ಟಣಗಳಲ್ಲಿ ಭುಗಿಲೆದ್ದಿರುವ ಕೋಮು ಹಿಂಸಾಚಾರವನ್ನು ಮಟ್ಟಹಾಕಲು ನಿತೀಶ್ ಕುಮಾರ್ ನೇತೃತ್ವದ ಮಹಾಘಟಬಂಧನ ಸರಕಾರವು ವಿಫಲವಾಗಿದೆಯೆಂದು ಕೇಂದ್ರ ಗೃಹ ಸಚಿವ ಅಮಿತ್ಶಾ ರವಿವಾರ ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ 2025ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದರೆ ಗಲಭೆಕೋರರನ್ನು ಬುಡಮೇಲಾಗಿ ನೇತುಹಾಕಲಿದೆ ಎಂದವರು ಹೇಳಿದ್ದಾರೆ.
ರಾಜ್ಯದಲ್ಲಿ ಭುಗಿಲೆದ್ದ ಕೋಮುಹಿಂಸಾಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ ಶೀಘ್ರದಲ್ಲೇ ಸಹಜತೆಯು ಮರಳಲೆಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು. ಹಿಂಸಾಚಾರದ ಬಗ್ಗೆ ಇಂದು ಬೆಳಗ್ಗೆ ರಾಜ್ಯಪಾಲರ ಜೊತೆ ಮಾತನಾಡಿದಾಗ, ಜೆಡಿಯು ಅಧ್ಯಕ್ಷ ರಂಜನ್ ಸಿಂಗ್ ಯಾನೆ ಲಲನ್ ಸಿಂಗ್ ಅವರು ರೋಷಗೊಂಡಿದ್ದಾರೆ. ಬಿಹಾರದ ಬಗ್ಗೆ ನಾನು ಯಾಕೆ ಚಿಂತಿಸಬೇಕು ಎಂದವರು ಪ್ರಶ್ನಿಸಿದರು ನಾನು ಕೇಂದ್ರ ಸಚಿವ. ಬಿಹಾರದ ಕಾನೂನು, ಸುವ್ಯವಸ್ಥೆಯ ಪರಿಸ್ಥಿತಿ ನನಗೂ ಕಾಳಜಿಯ ವಿಷಯವೆಂದು ಅಮಿತ್ ಶಾ ಹೇಳಿದರು.
ಸತತ ಮೂರನೆ ಬಾರಿಗೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಬೇಕೆಂದು ದೇಶದ ಜನತೆ ನಿರ್ಧರಿಸಿಬಿಟ್ಟಿದ್ದಾರೆ. ಹಾಗಾದಾಗ, ಪ್ರಧಾನಿ ಪಟ್ಟವನ್ನಲಂಕರಿಸುವ ನಿತೀಶ್ ಕುಮಾರ್ ಅವರ ಕನಸು ಭಗ್ನವಾಗಲಿದೆ ಮತ್ತು ಅವರು ಮುಖ್ಯಮಂತ್ರಿ ಸ್ಥಾನವನ್ನು ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ಗೆ ಹಸ್ತಾಂತರಿಸುವ ತನ್ನ ಭರವಸೆಯಿಂದ ಹಿಂದೆ ಸರಿಯಲಿದ್ದಾರೆ ಎಂದು ಅಮಿತ್ಶಾ ಹೇಳಿದರು.
ಲಾಲುಪ್ರಸಾದ್ ಹಾಗೂ ನಿತೀಶ್ ಕುಮಾರ್ ತುಷ್ಟೀಕರಣದ ರಾಜಕೀಯವನ್ನು ನಡೆಸುತ್ತಿದ್ದು, ಇದು ಭಯೋತ್ಪಾದನೆ ಬೆಳೆಯುವುದಕ್ಕೆ ನೆರವಾಯಿತು ಎಂದರು.
ಜಾತಿವಾದದ ವಿಷವನ್ನು ಹರಡುವ ನಿತೀಶ್ ಕುಮಾರ್ ಹಾಗೂ ‘ಜಂಗಲ್ರಾಜ್’ನ ಪ್ರವರ್ತಕ ಲಾಲುಪ್ರಸಾದ್ ಜೊತೆ ಬಿಜೆಪಿ ಎಂದಿಗೂ ಕೈಜೋಡಿಸುವುದಿಲ್ಲವೆಂದು ಶಾ ತಿಳಿಸಿದರು.
ಕಾಂಗ್ರೆಸ್, ಜೆಡಿಯು ಆರ್ಜೆಡಿ , ಟಿಎಂಸಿ ಅಯೋಧೆಯಯಲ್ಲಿ ರಾಮಮಂದಿರದ ನಿರ್ಮಾಣವನ್ನು ವಿರೋಧಿಸಿದ್ದವು. ಆರೆ ಒಂದು ಶುಭಪ್ರಾತಃಕಾಲದಂದು ಮೋದಿಯವರು ‘ಗಗನ’ದಷ್ಟೆತ್ತರದ ದೇಗುಲದ ನಿರ್ಮಾಣಕ್ಕೆ ಶಿಲಾನ್ಯಾಸಮಾಡಿದರು ಎಂದು ಅಮಿತ್ಶಾ ಹೇಳಿದ್ದಾರೆ.







