ಕಾಂಗ್ರೆಸ್ ಫೈಲ್ಸ್ ಸರಣಿಯ ಮೊದಲ ವೀಡಿಯೊ ಬಿಡುಗಡೆ ಮಾಡಿದ ಬಿಜೆಪಿ

ಹೊಸದಿಲ್ಲಿ, ಎ.2: ಲೋಕಸಭಾ ಚುನಾವಣೆಗಳಿಗೆ ಮುನ್ನ ಬಿಜೆಪಿಯು ರವಿವಾರ ‘ಕಾಂಗ್ರೆಸ್ ಫೈಲ್ಸ್’ವೀಡಿಯೊ ಸರಣಿಯ ಮೊದಲ ಸಂಚಿಕೆಯನ್ನು ಬಿಡುಗಡೆಗೊಳಿಸುವ ಮೂಲಕ ಕಾಂಗ್ರೆಸ್ ವಿರುದ್ಧ ಇನ್ನೊಂದು ಸುತ್ತಿನ ದಾಳಿಗೆ ಚಾಲನೆ ನೀಡಿದೆ. ಕಾಂಗ್ರೆಸ್ನ ಭ್ರಷ್ಟಾಚಾರಗಳನ್ನು ಬಯಲಿಗೆಳೆಯುವುದು ವೀಡಿಯೊ ಸರಣಿಯ ಉದ್ದೇಶವಾಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
‘ಕಾಂಗ್ರೆಸ್ ಫೈಲ್ಸ್ನ ಮೊದಲ ಸಂಚಿಕೆ ಬಿಡುಗಡೆಗೊಂಡಿದೆ. ಕಾಂಗ್ರೆಸ್ ಆಡಳಿತದಡಿ ಹೇಗೆ ಒಂದರ ನಂತರ ಒಂದರಂತೆ ಭ್ರಷ್ಟಾಚಾರ ಮತ್ತು ಹಗರಣಗಳು ನಡೆದಿದ್ದವು ಎನ್ನುವುದನ್ನು ನೋಡಿ’ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಟ್ವೀಟಿಸಿದೆ.
‘ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ’ ಎಂಬ ಶೀರ್ಷಿಕೆಯ ವೀಡಿಯೊ ಸಂಚಿಕೆಯಲ್ಲಿ ಬಿಜೆಪಿಯು, ಕಾಂಗ್ರೆಸ್ ತನ್ನ 70 ವರ್ಷಗಳ ಅಧಿಕಾರಾವಧಿಯಲ್ಲಿ ಸಾರ್ವಜನಿಕರಿಂದ 482069,00,00,000 ರೂ.ಗಳನ್ನು ಲೂಟಿ ಮಾಡಿದೆ. ಈ ಹಣವನ್ನು ಭದ್ರತೆ ಮತ್ತು ಅಭಿವೃದ್ಧಿಯ ಹಲವಾರು ಉಪಯುಕ್ತ ಕೇತ್ರಗಳಿಗೆ ಬಳಸಬಹುದಾಗಿತ್ತು ಎಂದು ಹೇಳಿದೆ.
‘ಈ ಮೊತ್ತದಲ್ಲಿ 24 ಐಎನ್ಎಸ್ ವಿಕ್ರಾಂತ್ಗಳು,300 ರಫೇಲ್ ಯುದ್ಧವಿಮಾನಗಳು ಮತ್ತು 1,000 ಮಂಗಳ ಯಾನಗಳನ್ನು ಖರೀದಿಸಬಹುದಿತ್ತು. ಆದರೆ ದೇಶವು ಕಾಂಗ್ರೆಸ್ನ ಭ್ರಷ್ಟಾಚಾರಕ್ಕೆ ಬೆಲೆಯನ್ನು ತೆರುತ್ತಿದೆ ಮತ್ತು ಪ್ರಗತಿಯ ಸ್ಪರ್ಧೆಯಲ್ಲಿ ಹಿಂದೆ ಬಿದ್ದಿದೆ ’ ಎಂದೂ ವೀಡಿಯೊ ಸಂದೇಶದಲ್ಲಿ ಸೇರಿಸಲಾಗಿದೆ.
2004ರಿಂದ 2014ರವರೆಗಿನ ಕಾಂಗ್ರೆಸ್ ಅಧಿಕಾರಾವಧಿಯನ್ನು ‘ಕಳೆದುಹೋದ ದಶಕ ’ಎಂದೂ ಬಿಜೆಪಿ ಬಣ್ಣಿಸಿದೆ.
‘ಇಡೀ 70 ವರ್ಷಗಳನ್ನು ಪಕ್ಕಕ್ಕಿರಿಸಿ 2002-2014ರ ಕೊನೆಯ ಅಧಿಕಾರಾವಧಿಯನ್ನು ನಾವು ನೋಡಿದರೆ ಅದು ‘ಕಳೆದುಹೋದ ದಶಕ’ವಾಗಿತ್ತು. ಮನಮೋಹನ್ ಸಿಂಗ್ ಸರಕಾರದ ನೇತೃತ್ವ ವಹಿಸಿದ್ದು,ತನ್ನ ಆಡಳಿತದಲ್ಲಿ ನಡೆಯುತ್ತಿದ್ದ ಎಲ್ಲ ಭ್ರಷ್ಟಾಚಾರಗಳ ಬಗ್ಗೆ ಕುರುಡಾಗಿದ್ದರು. ಆ ದಿನಗಳಲ್ಲಿ ವೃತ್ತಪತ್ರಿಕೆಗಳು ಭ್ರಷ್ಟಾಚಾರದ ಸುದ್ದಿಗಳಿಂದ ತುಂಬಿರುತ್ತಿದ್ದವು ಮತ್ತು ಅವುಗಳನ್ನು ನೋಡಿ ಭಾರತೀಯರು ನಾಚಿಕೆಯಿಂದ ತಲೆತಗ್ಗಿಸುತ್ತಿದ್ದರು. 1.86 ಲ.ಕೋ.ರೂ.ಗಳ ಕಲ್ಲಿದ್ದಲು ಹಗರಣ,1.76 ಲ.ಕೋ.ರೂ.ಗಳ 2ಜಿ ಸ್ಪೆಕ್ಟ್ರಂ ಹಗರಣ,10 ಲ.ಕೋ.ರೂ.ಗಳ ನರೇಗಾ ಹಗರಣ ಮತ್ತು 70,000 ಕೋ.ರೂ.ಗಳ ಕಾಮನ್ವೆಲ್ತ್ ಹಗರಣ;ಇವೆಲ್ಲವೂ ಕಾಂಗ್ರೆಸ್ ಆಡಳಿತದ ಆ ದಶಕದಲ್ಲಿಯೇ ನಡೆದಿದ್ದವು ಎಂದು ವೀಡಿಯೊದಲ್ಲಿ ಹೇಳಲಾಗಿದೆ.
ವೀಡಿಯೊದ ಅಂತ್ಯದಲ್ಲಿ ‘ಇದು ಕಾಂಗ್ರೆಸ್ನ ಭ್ರಷ್ಟಾಚಾರದ ಟ್ರೇಲರ್ ಮಾತ್ರ,ಪಿಕ್ಚರ್ ಇನ್ನೂ ಮುಗಿದಿಲ್ಲ ’ಎಂದೂ ಬಿಜೆಪಿ ಸೇರಿಸಿದೆ.
Congress Files के पहले एपिसोड में देखिए, कैसे कांग्रेस राज में एक के बाद एक भ्रष्टाचार और घोटाले हुए… pic.twitter.com/vAZ7BDZtFi
— BJP (@BJP4India) April 2, 2023







