ಐಪಿಎಲ್-2023: ಮೊದಲ ಪಂದ್ಯದಲ್ಲಿ ಮುಂಬೈ ತಂಡವನ್ನು ಮಣಿಸಿದ ಆರ್‌ಸಿಬಿ
ವಿರಾಟ್ ಕೊಹ್ಲಿ, ಪ್ಲೆಸಿಸ್ ಭರ್ಜರಿ ಜೊತೆಯಾಟ

ಬೆಂಗಳೂರು, ಎ.2: ನಾಯಕ ಎಫ್‌ಡು ಪ್ಲೆಸಿಸ್ ಹಾಗೂ ವಿರಾಟ್ ಕೊಹ್ಲಿ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ ಟೂರ್ನಿಯ 5ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 8 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ.
ಎಂ.ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ರವಿವಾರ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ತಂಡವು ತಿಲಕ್ ವರ್ಮಾ ಭರ್ಜರಿ ಅರ್ಧಶತಕದ(ಔಟಾಗದೆ 84 ರನ್, 46 ಎಸೆತ, 9 ಬೌಂಡರಿ, 4 ಸಿಕ್ಸರ್)ಕೊಡುಗೆಯ ಸಹಾಯದಿಂದ ಆರಂಭಿಕ ಕುಸಿತದಿಂದ ಚೇತರಿಸಿಕೊಂಡು ಬೆಂಗಳೂರು ವಿರುದ್ಧ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತು.
ಗೆಲ್ಲಲು 172 ರನ್ ಗುರಿ ಪಡೆದ ಆರ್‌ಸಿಬಿ 16.2 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 172 ರನ್ ಗಳಿಸಿತು. ಇನಿಂಗ್ಸ್ ಆರಂಭಿಸಿದ ಕೊಹ್ಲಿ(ಔಟಾಗದೆ 82 ರನ್, 49 ಎಸೆತ)ಹಾಗೂ ಪ್ಲೆಸಿಸ್(73 ರನ್, 43 ಎಸೆತ)ಮೊದಲ ವಿಕೆಟಿಗೆ 148 ರನ್ ಜೊತೆಯಾಟ ನಡೆಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು.
ಪ್ಲೆಸಿಸ್ ಹಾಗೂ ದಿನೇಶ್ ಕಾರ್ತಿಕ್(0)ಬೆನ್ನುಬೆನ್ನಿಗೆ ಔಟಾದಾಗ ಕೊಹ್ಲಿ ಹಾಗೂ ಮ್ಯಾಕ್ಸ್‌ವೆಲ್(ಔಟಾಗದೆ 12)ಗೆಲುವಿನ ವಿಧಿ ವಿಧಾನ ಪೂರೈಸಿದರು.