ಜೆರುಸಲೇಂನಲ್ಲಿ ಹಿಂಸಾಚಾರ: ಕನಿಷ್ಠ ಇಬ್ಬರು ಫೆಲೆಸ್ತೀನಿಯರು ಮೃತ್ಯು

ಜೆರುಸಲೇಂ, ಎ.2: ಆಕ್ರಮಿತ ಪಶ್ಚಿಮದಂಡೆಯಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಇಸ್ರೇಲ್ ಸೇನೆಯ ಕಾರ್ಯಾಚರಣೆಯಲ್ಲಿ ಇಬ್ಬರು ಫೆಲೆಸ್ತೀನೀಯರು ಮೃತಪಟ್ಟಿರುವುದಾಗಿ ಫೆಲೆಸ್ತೀನ್ನ ಆರೋಗ್ಯ ಇಲಾಖೆ ಹೇಳಿದೆ.
ಆಕ್ರಮಿತ ಪಶ್ಚಿಮದಂಡೆಯಲ್ಲಿ ಫೆಲೆಸ್ತೀನ್ ಪ್ರಜೆಯೊಬ್ಬ ತನ್ನ ಕಾರನ್ನು ಯೋಧರ ಗುಂಪಿನತ್ತ ಚಲಾಯಿಸಿದಾಗ ಹಲವು ಯೋಧರು ಗಾಯಗೊಂಡಿದ್ದಾರೆ. ಆಗ ಯೋಧರು ಆತ್ಮರಕ್ಷಣೆಗೆ ಗುಂಡು ಹಾರಿಸಿದಾಗ ಆರೋಪಿ ಮೃತಪಟ್ಟಿದ್ದಾನೆ ಎಂದು ಇಸ್ರೇಲ್ ಹೇಳಿದೆ. ಮೃತಪಟ್ಟ ವ್ಯಕ್ತಿ ಫೆಲೆಸ್ತೀನ್ ಭದ್ರತಾ ಪಡೆಯ ಸದಸ್ಯ ಎಂದು ಫೆಲೆಸ್ತೀನ್ ಮೂಲಗಳು ಹೇಳಿವೆ.
ಈ ಮಧ್ಯೆ, ಅಲ್-ಅಖ್ಸಾ ಮಸೀದಿಯ ಆವರಣದಲ್ಲಿ ಇಸ್ರೇಲ್ ಪಡೆ ಬಂಧಿಸಿದ್ದ ವ್ಯಕ್ತಿಯೊಬ್ಬ ಭದ್ರತಾ ಸಿಬಂದಿಯ ಕೈಯಿಂದ ಬಂದೂಕವನ್ನು ಕಸಿದುಕೊಂಡು ಗುಂಡು ಹಾರಿಸಿದಾಗ ಭದ್ರತಾ ಸಿಬಂದಿಯ ಪ್ರತಿದಾಳಿಯಲ್ಲಿ ಹತನಾಗಿದ್ದಾನೆ ಎಂದು ಇಸ್ರೇಲ್ ಹೇಳಿದೆ. ಮೃತನನ್ನು 26 ವರ್ಷದ ಮುಹಮ್ಮದ್ ಖಲೀದ್ ಅಲ್-ಒಸಾಯಿಬ್ ಎಂದು ಗುರುತಿಸಲಾಗಿದ್ದು ಈತ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಲಿಲ್ಲ.
ಈತನನ್ನು ಇಸ್ರೇಲ್ ಸೇನೆ ಅನ್ಯಾಯವಾಗಿ ಹತ್ಯೆ ಮಾಡಿದ್ದು ಈ ಬಗ್ಗೆ ತನಿಖೆ ನಡೆಯಬೇಕು ಎಂದು ದಕ್ಷಿಣ ಇಸ್ರೇಲ್ನ ‘ಯುನೈಟೆಟ್ ಅರಬ್ಲಿಸ್ಟ್’ ಪಕ್ಷದ ಸಂಸದ ಮನ್ಸೂರ್ ಅಬ್ಬಾಸ್ ಆಗ್ರಹಿಸಿದ್ದಾರೆ.
ಇಸ್ರೇಲ್ ಸೇನೆ ಸ್ವಯಂರಕ್ಷಣೆಗೆ ಪ್ರತಿದಾಳಿ ನಡೆಸಿದೆ ಎಂಬ ಮಾಹಿತಿ ಲಭಿಸಿದೆ. ಈ ಘಟನೆ ನಡೆದ ಸ್ಥಳವು ಸಿಸಿಟಿವಿ ಕ್ಯಾಮೆರಾದ ವ್ಯಾಪ್ತಿಯಲ್ಲಿಲ್ಲ. ಆದ್ದರಿಂದ ಪ್ರತ್ಯಕ್ಷದರ್ಶಿಗಳ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುವುದು ಎಂದು ಪೊಲೀಸರ ವರ್ತನೆ ಬಗ್ಗೆ ತನಿಖೆ ನಡೆಸುವ ನ್ಯಾಯ ಇಲಾಖೆಯ ವಕ್ತಾರರು ಹೇಳಿದ್ದಾರೆ. ಇಸ್ರೇಲ್ ಅಧಿಕಾರಿಗಳ ಕೃತ್ಯವನ್ನು ತಾನು ಬೆಂಬಲಿಸುವುದಾಗಿ ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವ ಇಟಮರ್ ಬೆನ್ಗ್ವಿರ್ ಪ್ರತಿಕ್ರಿಯಿಸಿದ್ದಾರೆ.