ಇದ್ರೀಸ್ ಪಾಷಾ ಹತ್ಯೆಗೆ ಸಾರ್ವಜನಿಕರ ಆಕ್ರೋಶ: ಬಂಧನಕ್ಕೆ ಆಗ್ರಹ

ಮಂಡ್ಯ, ಎ.2: ಗೋಸಾಗಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಮಾಯಕನೊಬ್ಬನನ್ನು ಪುನೀತ್ ಕೆರೆಹಳ್ಳಿ ತನ್ನ ತಂಡದ ಜೊತೆಗೆ ಸೇರಿ ಹತ್ಯೆಗೈದಿದ್ದು, ಆತನನ್ನು ತಕ್ಷಣ ಬಂಧಿಸಿ ಕಠಿಣ ಕ್ರಮ ಜರುಗಿ ಸಬೇಕು ಎಂದು ಮಂಡ್ಯ ಜಿಲ್ಲೆಯ ನಾಗರಿಕರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಹಿರಿಯ ಮುಖಂಡ ಮುಜಾಹಿದ್ ಅಲಿಖಾನ್, ಮೃತ ಇದ್ರೀಸ್ ಗೋ ವ್ಯಾಪಾರಿಯಲ್ಲ. ಆತ ಚಾಲಕ. ಇಷ್ಟಕ್ಕೂ ರೈತರಿಂದ ಕೊಂಡುಕೊಂಡ ಗೋವುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿರಲಿಲ್ಲ. ಊರಿನ ಸಂತೆಯಲ್ಲಿ ಮಾರಾಟಕ್ಕೆ ಕೊಂಡು ಹೋಗಲಾಗುತ್ತಿತ್ತು. ಒಂದು ವೇಳೆ ನಿಯಮ ಉಲ್ಲಂಘಿಸಿದ್ದರೆ ಪೊಲೀಸರಿಗೆ ತಿಳಿಸಿ ಕಾನೂನು ಕ್ರಮ ಜರುಗಿಸಬೇಕು. ಹೀಗೆ ಅನೈತಿಕ ಪೊಲೀಸ್ ಗಿರಿ ನಡೆಸಿ ವ್ಯಕ್ತಿಯನ್ನು ಕೊಂದು ಹಾಕುವುದು ಎಷ್ಟು ಸರಿ? ಎಂದು ಅವರು ಪ್ರಶ್ನಿಸಿದರು.
ಅನೈತಿಕ ಪೊಲೀಸ್ ಗಿರಿಯಿಂದ ಮೃತ ಇದ್ರೀಸ್ ಪಾಷಾ ಕುಟುಂಬ ಬೀದಿಗೆ ಬಿದ್ದಿದೆ. ಆತನ ನಾಲ್ಕು ಮಕ್ಕಳು ಅನಾಥರಾಗಿದ್ದಾರೆ. ಪಾಷಾ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ನಿಷ್ಪಕ್ಷ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು ಎಂದು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಪೊಲೀಸ್ ಇಲಾಖೆ ಇದೆಯೆ?: ಮುಸ್ಲಿಮ್ ಒಕ್ಕೂಟದ ಮುಖಂಡ ಮುಹಮ್ಮದ್ ತಾಹೀರ್ ಮಾತನಾಡಿ, ಕೃತ್ಯ ಎಸಗಿದ ಆರೋಪ ಹೊತ್ತಿರುವ ಪುನೀತ್ ಕೆರೆಹಳ್ಳಿ ಬಳಿ ಶಾಕ್ ಟ್ರೀಟ್ ಮೆಂಟ್ ನೀಡುವ ಗನ್ ಮತ್ತು ಮಾರಕಾಸ್ತ್ರಗಳಿವೆ ಎಂಬ ಮಾಹಿತಿ ಇದೆ. ಶಾಕ್ ಟ್ರೀಟ್‌ಮೆಂಟ್ ಗನ್ ಬಳಸಲು ಈತನಿಗೆ ಅಧಿಕಾರ ಕೊಟ್ಟ ವರು ಯಾರು? ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೇ? ಪೊಲೀಸ್ ಇಲಾಖೆ ಎಲ್ಲಿ ಹೋಗಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುನೀತ್ ಕೆರೆಹಳ್ಳಿ ಮೇಲೆ ಹೆಣ್ಣು ಮಕ್ಕಳನ್ನು ಬಳಸಿಕೊಂಡು ವೇಶ್ಯಾವಾಟಿಕೆ ದಂಧೆ ಮಾಡಿದ ಆರೋಪಗಳಿವೆ. ಈ ವ್ಯಕ್ತಿ ಆಡಳಿತಾರೂಢ ಬಿಜೆಪಿಯೊಂದಿಗೆ ಗುರುತಿಸಿಕೊಂಡು ತನ್ನದೇ ಆದ ಸಂಘಟನೆ ಕಟ್ಟಿಕೊಂಡು ಗೋಹತ್ಯೆ ನಿಷೇಧದ ಹೆಸರಿನಲ್ಲಿ ನಿಯಮಾನುಸಾರ ರಾಸುಗಳನ್ನು ಸಾಗಿಸುವವರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದಾನೆ ಎಂದು ಎಂದು ಅವರು ಆರೋಪಿಸಿದರು.
ಮಡುಗಟ್ಟಿದ ಸೂತಕದ ವಾತಾವರಣ: ಕನಕಪುರ ತಾಲೂಕಿನ ಸಾತನೂರು ಬಳಿ ನಕಲಿ ಗೋರಕ್ಷಕರಿಂದ ಹತ್ಯೆಗೀಡಾದ ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಇದ್ರೀಸ್ ಪಾಷಾ ಕುಟುಂಬ ಕಣ್ಣೀರಿ ನಲ್ಲಿ ಮುಳುಗಿದೆ. ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿದೆ.
ಸಾತನೂರಿನಿಂದ ಬೆಳಗ್ಗೆ 10 ಗಂಟೆಗೆ ಗುತ್ತಲಿಗೆ ಬಂದ ಇದ್ರೀಸ್ ಪಾಷಾ ಅವರ ಮೃತದೇಹದ ಅಂತ್ಯಸಂಸ್ಕಾರ ನಗರದ ಖಬರ್ ಸ್ಥಾನದಲ್ಲಿ ಜರುಗಿತು. ಅಪಾರ ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಮರು ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು.







