ಅಮೆರಿಕ-ಕೆನಡಾ ಗಡಿಯಲ್ಲಿ ಮೃತಪಟ್ಟ ನಾಲ್ವರು ಭಾರತೀಯರು ಗುಜರಾತ್ ಗ್ರಾಮದವರು

ಟೊರಾಂಟೊ: ಕೆನಡಾದಿಂದ ಅಕ್ರಮವಾಗಿ ದೋಣಿ ಮೂಲಕ ಅಮೆರಿಕಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾಗ ಕ್ವಿಬೆಕ್-ನ್ಯೂಯಾರ್ಕ್ ಗಡಿಯ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಎಂಟು ಜನರ ಪೈಕಿ ನಾಲ್ವರು ಭಾರತೀಯರು ಗುಜರಾತ್ ನ ಮೆಹಸಾನ ಜಿಲ್ಲೆಯ ಹಳ್ಳಿಯೊಂದರಲ್ಲಿ ವಾಸಿಸುತ್ತಿರುವ ಚೌಧರಿ ಕುಟುಂಬಕ್ಕೆ ಸೇರಿದವರು ಎಂದು ತಿಳಿದುಬಂದಿದೆ.
ಮೃತಪಟ್ಟ ಭಾರತೀಯರಲ್ಲಿ ದಂಪತಿ ಹಾಗೂ ಅವರ ಇಬ್ಬರು ವಯಸ್ಕ ಮಕ್ಕಳು ಸೇರಿದ್ದಾರೆ.
ಒಟ್ಟು ಎಂಟು ಮೃತದೇಹಗಳು ಈಗ ಪತ್ತೆಯಾಗಿವೆ. ಸೇಂಟ್ ಲಾರೆನ್ಸ್ ನದಿಯ ದಡದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದವರು ಭಾರತೀಯ ಹಾಗೂ ರೊಮೇನಿಯನ್ ಮೂಲದ ಎರಡು ಕುಟುಂಬಗಳು ಎಂದು ನಂಬಲಾಗಿದೆ. ಸಾವಿನ ಕಾರಣವನ್ನು ತನಿಖೆ ಮುಂದುವರಿಸಲಾಗಿದೆ ಎಂದು ಕೆನಡಾದ ಪೊಲೀಸರು ಹೇಳಿದ್ದಾರೆ.
ಮೃತರನ್ನು ಮೆಹಸಾನ ಜಿಲ್ಲೆಯ ವಿಜಾಪುರ ತಾಲೂಕಿನ ಮಣೆಕಪುರ-ಡಭಾಳ ಗ್ರಾಮದ ಚೌಧರಿ ಕುಟುಂಬಕ್ಕೆ ಸೇರಿದವರು ಎಂದು ಗುರುತಿಸಲಾಗಿದೆ.
ಮೃತರನ್ನು ಚೌಧರಿ ಪ್ರವೀಣಭಾಯ್ ವೆಲ್ಜಿಭಾಯಿ (50 ವರ್ಷ); ಚೌಧರಿ ದಕ್ಷಬೆನ್ ಪ್ರವೀಣ್‌ಭಾಯ್(, 45) ಚೌಧರಿ ವಿಧಿಬೆನ್ ಪ್ರವೀಣ್‌ಭಾಯ್(23 ವರ್ಷ) ಹಾಗೂ ಚೌಧರಿ ಮಿತ್‌ಕುಮಾರ್ ಪ್ರವೀಣ್‌ಭಾಯ್(20 ವರ್ಷ) ಎಂದು ಗುರುತಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯನ್ನು ಪರಿಶೀಲಿಸಿದ ನಂತರ ಚೌಧರಿ ಕುಟುಂಬಕ್ಕೆ ಪ್ರವೀಣ್ ಭಾಯಿ, ಅವರ ಪತ್ನಿ, ಮಕ್ಕಳು ಸಾವನ್ನಪ್ಪಿರುವ ವಿಷಯ ತಿಳಿದಿದೆ. ಎಪ್ರಿಲ್ 1 ರಂದು ನಾಲ್ವರು ಭಾರತೀಯರ ಸಾವಿನ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ಕುಟುಂಬದ ಸಂಬಂಧಿಕರ ಪ್ರಕಾರ, ಕಳೆದ 15 ದಿನಗಳಿಂದ ಈ ನಾಲ್ವರು ಟೊರೊಂಟೊಗೆ ತೆರಳಿದ ನಂತರ ಅವರೊಂದಿಗೆ ಯಾವುದೇ ರೀತಿಯ ಸಂಪರ್ಕವನ್ನು ಸಾಧಿಸಲು ಸಾಧ್ಯವಾಗಲಿಲ್ಲ.







