ಕರ್ನಾಟಕ ವಿಧಾನಸಭಾ ಚುನಾವಣೆ: ಜೆ.ಪಿ.ನಡ್ಡಾರನ್ನು ಭೇಟಿ ಮಾಡಿದ ಮನ್ಸುಖ್ ಮಾಂಡವಿಯಾ

ಹೊಸ ದಿಲ್ಲಿ: ಕೇಂದ್ರ ಸಚಿವ ಹಾಗೂ ಕರ್ನಾಟಕ ರಾಜ್ಯದ ಸಹ ಉಸ್ತುವಾರಿಯಾದ ಮನ್ಸುಖ್ ಮಾಂಡವಿಯಾ (mansukh mandaviya) ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಚರ್ಚಿಸಲು ಸೋಮವಾರ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಅವರನ್ನು ಲೋಕಸಭೆಯಲ್ಲಿ ಭೇಟಿಯಾಗಿದ್ದಾರೆ.
ಭಾನುವಾರ ಕರ್ನಾಟಕದಲ್ಲಿದ್ದ ಮನ್ಸುಖ್ ಮಾಂಡವಿಯಾ ಹಲವಾರು ಸಂಘಟನಾತ್ಮಕ ಸಭೆಗಳನ್ನು ನಡೆಸಿದ್ದು, ಈ ಕುರಿತ ಮಾಹಿತಿಯನ್ನು ನಡ್ಡಾ ಅವರೊಂದಿಗೆ ಹಂಚಿಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂಬರುವ ಚುನಾವಣೆಗೆ ಸಹ ಉಸ್ತುವಾರಿಯಾಗಿ ನೇಮಕವಾದಾಗಿನಿಂದ ಮನ್ಸುಖ್ ಮಾಂಡವಿಯಾ ಹಲವಾರು ಮುಖ್ಯ ಸಂಘಟನಾತ್ಮಕ ಸಭೆಗಳನ್ನು ನಡೆಸುತ್ತಿದ್ದಾರೆ.
ಕರ್ನಾಟಕದಲ್ಲಿ ಆಡಳಿತಾರೂಢ ಪಕ್ಷವಾಗಿರುವ ಬಿಜೆಪಿಯು ಎರಡನೆ ಅವಧಿಗೆ ಅಧಿಕಾರ ಹಿಡಿಯಲು ಎಲ್ಲ ಬಗೆಯ ಪ್ರಯತ್ನಗಳನ್ನೂ ಮಾಡುತ್ತಿದೆ. ಮುಂಬರುವ ಚುನಾವಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಚಾರ ಸಮಿತಿಯ ನೇತೃತ್ವ ವಹಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಚುನಾವಣಾ ನಿರ್ವಹಣಾ ಸಮಿತಿಯ ಮುಖ್ಯಸ್ಥೆ ಆಗಿದ್ದಾರೆ.
ಮಾರ್ಚ್ 29ರಂದು ಭಾರತೀಯ ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಪ್ರಕಟಿಸಿತ್ತು. 224 ವಿಧಾನಸಭಾ ಕ್ಷೇತ್ರಗಳ ಚುನಾವಣೆಯು ಮೇ 10ರಂದು ಒಂದೇ ಹಂತದಲ್ಲಿ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.







