ಹರೇಕಳ-ಅಡ್ಯಾರ್ ಸಂಪರ್ಕ ಸೇತುವೆ ಸಂಚಾರ ಮುಕ್ತಗೊಳಿಸಲು ಜಿಲ್ಲಾಧಿಕಾರಿಗೆ ಡಿವೈಎಫ್ ಐ ಮನವಿ
ಕೊಣಾಜೆ, ಎ.3: ಚುನಾವಣೆ ನೀತಿ ಸಂಹಿತೆ ಹೆಸರಲ್ಲಿ ಸಂಚಾರ ತಡೆಹಿಡಿದಿರುವ ಹರೇಕಳ-ಅಡ್ಯಾರ್ ಸಂಪರ್ಕಿಸುವ ಕಿಂಡಿ ಅಣೆಕಟ್ಟು ಸಹಿತ ಸೇತುವೆಯಲ್ಲಿ ಸಂಚಾರಕ್ಕೆ ಮುಕ್ತಗೊಳಿಸುವಂತೆ ಆಗ್ರಹಿಸಿ ಡಿವೈಎಫ್ ಐ ಹರೇಕಳ ಗ್ರಾಮ ಸಮಿತಿಯು ದ.ಕ. ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.
ಈ ಸೇತುವೆ ಕಾಮಗಾರಿ ಅನೇಕ ಸಮಯಗಳ ಹಿಂದೆಯೇ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಅವಕಾಶಗಳಿದ್ದರೂ ಇದೀಗ ಚುನಾವಣೆ ನೀತಿ ಸಂಹಿತೆ ಹೆಸರಲ್ಲಿ ಸೇತುವೆಯಲ್ಲಿ ಸಂಚಾರ ತಡೆಹಿಡಿಯಲಾಗಿದೆ. ಇದರಿಂದ ಈ ಭಾಗದ ಜನರಿಗೆ ತೊಂದರೆಯಾಗಿದೆ. ಆದುದರಿಂದ ಸೇತುವೆ ಸಂಚಾರಕ್ಕೆ ಮುಕ್ತಗೊಳಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಡಿವೈಎಫ್ ಐ ನಿಯೋಗ ಒತ್ತಾಯಿಸಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲೇಸೇತುವೆ ಕಾಮಗಾರಿಯು ಪೂರ್ಣಗೊಂಡಿದ್ದು, ಖಾಸಗಿ ವ್ಯಕ್ತಿಯೊಬ್ಬರು ಜಮೀನು ವಿಷಯಕ್ಕೆ ಸಂಬಂಧಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ವಾಹನ ಸಂಚಾರಕ್ಕೆ ಅವಕಾಶ ಸಿಗದೆ ಜನರು ನಿಗದಿತ (ಸಂಜೆ 7ರವರೆಗೆ) ಸಮಯದವರೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಸೇತುವೆಯ ಎರಡೂ ಕಡೆಗಳಲ್ಲಿ ರಸ್ತೆ ಕಾಮಗಾರಿಯು ಪೂರ್ಣಗೊಂಡಿತ್ತು. ಸೇತುವೆ ನಿರ್ವಹಣೆ ಸಂಬಂಧಪಟ್ಟ ಇಲಾಖೆಯವರು ಎಪ್ರಿಲ್ ಒಂದರಿಂದ ಸೇತುವೆಯಲ್ಲಿ ಸಾರ್ವಜನಿಕರ ಓಡಾಟ ಹಾಗೂ ಲಘು ವಾಹನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂಬ ಸಾರ್ವಜನಿಕ ಪ್ರಕಟನೆಯನ್ನು ಸಾರ್ವಜನಿಕ ಮಾಧ್ಯಮಗಳ ಮೂಲಕ ಹೇಳಿರುತ್ತಾರೆ. ಆದರೆ ಅಂದು ಚುನಾವಣೆ ನೀತಿ ಸಂಹಿತೆಯ ನೆಪವೊಡ್ಡಿ ಸೇತುವೆಯ ಗೇಟುಗಳನ್ನು ತೆಗೆಯದೆ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಟ್ಟಿಲ್ಲ.
ಸೇತುವೆ ನಿರ್ಮಾಣದ ಬಳಿಕ ಇಲ್ಲಿ ದೋಣಿ ಸಂಚಾರವೂ ನಿಂತಿದ್ದು, ಜನರ ಸಂಚಾರಕ್ಕೆ ತೊಂದರೆಯಾಗಿದೆ. ಇದೀಗ ರಾಜಕೀಯ ಕಾರಣದಿಂದ ಸೇತುವೆ ಸಂಚಾರ ತಡೆಹಿಡಿದಿರುವುದರಿಂದ ಸಾರ್ವನಿಕರಿಗೆ ಬಹಳಷ್ಟು ತೊಂದರೆಗಳಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೇತುವೆ ಸಂಚಾರಕ್ಕೆ ಶೀಘ್ರವೇ ಕ್ರಮ ಕೈಗೊಳ್ಳಬೇಕೆಂದು ಡಿವೈಎಫ್ ಐ ಹರೇಕಳ ಸಮಿತಿಯು ಮನವಿ ಮಾಡಿತು.
ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ತಡೆ ಹಿಡಿದಿರುವ ಹರೇಕಳ ಸೇತುವೆ ಸಂಚಾರವನ್ನು ಮುಕ್ತಗೊಳಿಸುವಂತೆ ಕೋರಿ ಡಿವೈಎಫ್ಐ ಹರೇಕಳ ಗ್ರಾಮ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.
ನಿಯೋಗದಲ್ಲಿ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ.ಕೆ.ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ತಾಲೂಕು ಅಧ್ಯಕ್ಷ ರಫೀಕ್ ಹರೇಕಳ, ಹರೇಕಳ ಗ್ರಾಮ ಸಮಿತಿಯ ಕಾರ್ಯದರ್ಶಿ ರಿಝ್ವಾನ್ ಖಂಡಿಗ, ಮಂಗಳೂರು ನಗರ ಅಧ್ಯಕ್ಷ ಜಗದೀಶ್ ಬಜಾಲ್, ಹೈದರ್ ಹರೇಕಳ, ಸತ್ತಾರ್ ಕೊಜಪಾಡಿ, ಉಸ್ಮಾನ್ ಕಣ್ಣೂರ್ ಉಪಸ್ಥಿತರಿದ್ದರು.