ಮಾನನಷ್ಟ ಪ್ರಕರಣ: ರಾಹುಲ್ ಗಾಂಧಿಗೆ ಜಾಮೀನು ನೀಡಿದ ಗುಜರಾತ್ ನ್ಯಾಯಾಲಯ

ಸೂರತ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 2019 ಮಾನನಷ್ಟ ಪ್ರಕರಣವೊಂದರಲ್ಲಿ ಇಂದು ಸೂರತ್‌ನ ನ್ಯಾಯಾಲಯ ಜಾಮೀನು ಒದಗಿಸಿದೆ. ತಮ್ಮನ್ನು ದೋಷಿಯೆಂದು ಘೋಷಿಸಿದ ಆದೇಶವನ್ನು ಪ್ರಶ್ನಿಸಿ ರಾಹುಲ್ ಸಲ್ಲಿಸಿರುವ ಅಪೀಲಿನ ಮೇಲಿನ ತೀರ್ಪು ಬರುವ ತನಕ ಅವರ ಎರಡು ವರ್ಷದ ಜೈಲು ಶಿಕ್ಷೆಯನ್ನು ತಡೆಹಿಡಿಯಲಾಗಿದೆ. ರಾಹುಲ್ ಅವರ ಅಪೀಲಿನ ವಿಚಾರಣೆಯನ್ನು ಗುಜರಾತ್‌ನ ನ್ಯಾಯಾಲಯ ಎಪ್ರಿಲ್ 13 ರಂದು ನಡೆಸಲಿದೆ.
ಮೋದಿ ಉಪನಾಮೆ ಕುರಿತು ತಾವು ಆಡಿದ ಮಾತು ಪ್ರಧಾನಿ ನರೇಂದ್ರ ಮೋದಿಗೆ ಮಾಡಿದ ಅವಮಾನ ಎಂಬರ್ಥ ನೀಡುತ್ತದೆ ಎಂಬ ದೂರಿನ ಆಧಾರದಲ್ಲಿ ತಮ್ಮನ್ನು ದೋಷಿ ಎಂದು ಘೋಷಿಸಿದ ನ್ಯಾಯಾಲಯದ ತೀರ್ಪನ್ನು ವಜಾಗೊಳಿಸಬೇಕೆಂದು ಕೋರಿ ರಾಹುಲ್ ಗಾಂಧಿ ಇಂದು ಸೂರತ್ ಸೆಷನ್ಸ್ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸಿದರು. ಅವರ ಜೊತೆಗೆ ಸಹೋದರಿ ಪ್ರಿಯಾಂಕ ಗಾಂಧಿ ವಾದ್ರ ಹಾಗೂ ಹಲವು ಕಾಂಗ್ರೆಸ್ ನಾಯಕರ ಸಹಿತ ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನ, ಛತ್ತೀಸಗಢ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ಮುಖ್ಯಮಂತ್ರಿಗಳಾದ ಅಶೋಕ್ ಗೆಹ್ಲೋಟ್, ಭೂಪೇಶ್ ಬಘೇಲ್ ಮತ್ತು ಸುಖ್ವಿಂದರ್ ಸಿಂಗ್ ಸುಕ್ಕು ಇದ್ದರು.
ಎಪ್ರಿಲ್ 13 ರಂದು ನಡೆಯಲಿರುವ ವಿಚಾರಣೆಗೆ ರಾಹುಲ್ ಖುದ್ದಾಗಿ ಹಾಜರಾಗುವ ಅಗತ್ಯವಿಲ್ಲ.
ಕೋರ್ಟ್‌ನ ಇಂದಿನ ಆದೇಶದ ನಂತರ ರಾಹುಲ್ ಟ್ವೀಟ್ ಮಾಡಿ ತಾವು ʻಮಿತ್ರಕಾಲ್ʼ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದರು.
"ಇದು ಪ್ರಜಾಪ್ರಭುತ್ವವನ್ನು ಉಳಿಸುವ, ಮಿತ್ರಕಾಲ್ ವಿರುದ್ಧದ ಹೋರಾಟ, ಈ ಹೋರಾಟದಲ್ಲಿ ಸತ್ಯ ನನ್ನ ಅಸ್ತ್ರ ಮತ್ತು ಸತ್ಯವೇ ನನ್ನ ಬೆಂಬಲ," ಎಂದು ರಾಹುಲ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.





