ಬೆಳೆ ಸಂರಕ್ಷಣೆಗೆ ಕೋವಿ ಠೇವಣಿಯಿಂದ ವಿನಾಯತಿ ಪ್ರಕರಣವಾರು ಪರಿಶೀಲಿಸಿ ಕ್ರಮ: ದ.ಕ. ಜಿಲ್ಲಾಧಿಕಾರಿ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಾಡು ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಆಯುಧ ಪರವಾನಿಗೆ ಪಡೆದ ಕೃಷಿಕರು ಠೇವಣಿಯಿಂದ ವಿನಾಯಿತಿ ಕೋರಿ ಸಲ್ಲಿಸಲಾಗುವ ಅರ್ಜಿಗಳನ್ನು ಪ್ರಕರಣವಾರು ಪರಿಶೀಲಿಸಿ ಕ್ರಮ ವಹಿಸಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ರವಿಕುಮಾರ್ ಎಂ.ಆರ್. ನೇತೃತ್ವದ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ತೀರ್ಮಾನಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜಿಲ್ಲಾ ಮಟ್ಟದ ಪರಿಶೀಲನಾ ಸಮಿತಿ ಸಭೆ ನಡೆದಿದ್ದು, ರೈತರ ಬೆಳೆಯ ಸಂರಕ್ಷಣೆಯ ಹಿತದೃಷ್ಟಿಯಿಂದ ವಿನಾಯಿತಿ ಕೋರಿ ಬರುವ ಅರ್ಜಿದಾರರ ಕೋರಿಯನ್ನು ಪ್ರಕರಣವಾರು ಪರಿಶೀಲಿಸಿ ಅಗತ್ಯತೆ ಹಾಗೂ ಅನಿವಾರ್ಯತೆಯ ಮೇರೆಗೆ ವಿನಾಯಿತಿ ನೀಡಲು ತೀರ್ಮಾನಿಸಲಾಯಿತು.
ಕೃಷಿಕರು ಆಯುಧಗಳನ್ನು ಠೇವಣಿ ಇರಿಸಿದಲ್ಲಿ ಕಾಡುಪ್ರಾಣಿಗಳನ್ನು ಬೆದರಿಸಲು ಆಯುಧಗಳಿಲ್ಲದೆ ಜೀವಹಾನಿ ಹಾಗೂ ಕೃಷಿ ಹಾನಿಯಾಗುವ ಸಾಧ್ಯತೆಗಳು ಹೆಚ್ಚಾಗಿರುವುದು ಕಂಡು ಬಂದಿದೆ. ಆಯುಧ ಠೇವಣಿಗೆ ಸಂಬಂಧಿಸಿ ಈ ಹಿಂದೆ ಕೇರಳದ ನ್ಯಾಯಾಲಯ ನೀಡಿರುವ ತೀರ್ಪು ಮತ್ತು ಭಾರತದ ಚುನಾವಣಾ ಆಯೋಗ ನೀಡಿರುವ ಆದೇಶಗಳ ಹಿನ್ನೆಯಲ್ಲಿ ಸಾಧಕ ಬಾಧಕಗಳ ಕುರಿತು ಸಭೆಯಲ್ಲಿ ವಿವರವಾಗಿ ಚರ್ಚಿಸಿ ತೀರ್ಮಾನಿಸಲಾಗಿದೆ.
ಪ್ರತಿ ಚುನಾವಣೆ ಸಮಯದಲ್ಲೂ ರೈತರು ಸೇರಿದಂತೆ ಎಲ್ಲರೂ ತಮ್ಮ ಪರವಾನಗಿಯುಳ್ಳ ಕೋವಿ/ಆಯುಧಗಳನ್ನು ಸಮೀಪದ ಠಾಣೆಯಲ್ಲಿ ಠೇವಣಿ ಇಡಬೇಕಾಗುತ್ತದೆ. ಇದೀಗ ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಜಿಲ್ಲಾಧಿಕಾರಿ ಕೋವಿ/ಆಯುಧಗಳನ್ನು ಠೇವಣಿ ಇಡುವಂತೆ ಆದೇಶವನ್ನು ಮಾಡಿದ್ದರು. ಆದರೆ ಆ ಬಳಿಕ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ವಿವಿಧ ತಾಲೂಕುಗಳ ತಹಶೀಲ್ದಾರರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.
ಇಂತಹ ಪ್ರಕರಣಗಳಲ್ಲಿ ವಿನಾಯತಿ ಕೋರಿ ಬಂದಿರುವ ಅರ್ಜಿಗಳಿಗೆ ಅವಕಾಶ ನೀಡಿ, ಅರ್ಜಿದಾರರ ಕೋರಿಕೆಯನ್ನು ಪ್ರಕರಣವಾರು ಪರಿಶೀಲಿಸಿ , ಅಗತ್ಯತೆ ಮತ್ತು ಅನಿವಾರ್ಯತೆಗಳ ಬಗ್ಗೆ ಪರಿಶೀಲಿಸಿಕೊಂಡು ವಿನಾಯತಿ ನೀಡಲು ಸಭೆ ತೀರ್ಮಾನಿಸಿದೆ.
ವಿನಾಯತಿ ಕೋರಿ ಸಲ್ಲಿಸುವ ಅರ್ಜಿಗಳನ್ನು ಪರಿಶೀಲಿಸಿ ಜಿಲ್ಲಾ ಮಟ್ಟದ ಸಮಿತಿಗೆ ವರದಿ ಸಲ್ಲಿಸಲು ತಾಲೂಕು ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ತಾಲೂಕು ತಹಶೀಲ್ದಾರ್ ಸಮಿತಿಯ ಅಧ್ಯಕ್ಷರಾಗಿದ್ದು, ವಲಯ ಅರಣ್ಯಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ, ಪೊಲೀಸ್ ಉಪನಿರೀಕ್ಷರು, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು ಮತ್ತು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರು ಸಮಿತಿಯಲ್ಲಿ ಸದಸ್ಯರಾಗಿರುತ್ತಾರೆ.
ಕರಾವಳಿಯ ಕಡಬ, ಸುಳ್ಯ, ಪುತ್ತೂರು, ಬೆಳ್ತಂಗಡಿಯಂತಹ ಪ್ರದೇಶಗಳಲ್ಲಿ ಕಾಡು ಪ್ರದೇಶ ಹೆಚ್ಚಾಗಿದ್ದು, ಆನೆ, ಮಂಗ, ಕಾಡುಹಂದಿ, ಹಾಗೂ ಇತರ ಕಾಡುಪ್ರಾಣಿಗಳ ಹಾವಳಿ ಜಾಸ್ತಿ ಇದ್ದು, ಕಡಬದಲ್ಲಿ ಇಬ್ಬರು ಆನೆ ದಾಳಿಯಲ್ಲಿ ಮೃತಪಟ್ಟಿದ್ದರು. ಈ ಎಲ್ಲ ಸಮಸ್ಯೆಗಳು ಗ್ರಾಮ ವಾಸ್ತವ್ಯದ ಸಂದರ್ಭ ಜಿಲ್ಲಾಧಿಕಾರಿಗಳ ಅರಿವಿಗೂ ಬಂದಿತ್ತು. ಹೀಗಾಗಿ ಭತ್ತ, ಅಡಿಕೆ ಬೆಳೆಯನ್ನು ನಂಬಿಕೊಂಡಿರುವ ಕರಾವಳಿಯ ರೈತರು ತಮ್ಮ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರಗಳು ಅತ್ಯಗತ್ಯವಾಗಿದೆ. ರೈತರು ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದರೆ ಅನಿವಾರ್ಯತೆ ಪರಿಶೀಲಿಸಿ ವಿನಾಯಿತಿ ನೀಡಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ
ಆತ್ಮರಕ್ಷಣೆಗೆ ಪರವಾನಿಗೆ ಪಡೆದವರಿಗೆ ವಿನಾಯತಿ ಇಲ್ಲ: ಆತ್ಮರಕ್ಷಣೆಗಾಗಿ ಆಯುಧ ಪರವಾನಿಗೆ ಪಡೆದವರಿಗೆ ಶಸ್ತ್ರಾಸ್ತ್ರಗಳ ಠೇವಣಿಯಲ್ಲಿ ವಿನಾಯತಿ ಇಲ್ಲ. ಜಾಮೀನಿನಲ್ಲಿ ಬಿಡುಗಡೆಯಾದ ವ್ಯಕ್ತಿಗಳು, ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಗಳು ಮತ್ತು ಈ ಹಿಂದೆ ಚುನಾವಣಾ ಸಮಯದಲ್ಲಿ ಗಲಭೆ/ದೊಂಬಿಗಳಲ್ಲಿ ಭಾಗಿಯಾದವರು ತಮ್ಮಲ್ಲಿರುವ ಆಯುಧಗಳ ಠೇವಣಿ ಇಡಬೇಕಾಗುತ್ತದೆ. ಈ ಮೂರು ವರ್ಗದವರಿಗೆ ವಿನಾಯತಿ ಇಲ್ಲ ಎಂದು ಸಮಿತಿಯು ತೀರ್ಮಾನಿಸಿದೆ.
ಆತ್ಮರಕ್ಷಣೆಗಾಗಿ ಪರವಾನಿಗೆ ಪಡೆದವರು ತಮ್ಮ ಆಯುಧಗಳನ್ನು ಹತ್ತಿರದ ಪೊಲೀಸ್ ಠಾಣೆಯಲ್ಲಿ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ಹತ್ತಿರದ ನಮೂನೆ ೮ರಲ್ಲಿ ಶಸ್ತ್ರಾಸ್ತ್ರಗಳನ್ನು ಠೇವಣಿ ಇಡುವ ಬಗ್ಗೆ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದು ಗುಂಡು ವ್ಯಾಪಾರಿಗಳಲ್ಲಿ ಎ.೨೪ರೊಳಗೆ ಠೇವಣಿ ಇಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಯಾವುದೇ ವ್ಯಕ್ತಿ ತಮ್ಮ ರಕ್ಷಣೆಗೆ ಆಯುಧದ ತೀರಾ ಅಗತ್ಯ ಇದ್ದಲ್ಲಿ ಎ. 20ರವರೆಗೆ ಸಂಬಂಧಪಟ್ಟ ಪೂರಕ ದಾಖಲೆಗಳೊಂದಿಗೆ ಪೊಲೀಸ್ ಅಧೀಕ್ಷಕರಿಗೆ ಅರ್ಜಿಯನ್ನು ಸಲ್ಲಿಸಿದರೆ, ಅವರಿಗೆ ಸಮಂಜಸವೆಂದು ಕಂಡು ಬಂದಲ್ಲಿ ವಿನಾಯಿತಿ ನೀಡುವ ಕುರಿತು ಅಗತ್ಯ ಕ್ರಮ ವಹಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ, ಪೊಲೀಸ್ ಅಧೀಕ್ಷಕ ಡಾ.ವಿಕ್ರಮ್ ಅಮಟೆ, ಬಂಟ್ವಾಳ ಪೊಲೀಸ್ ಉಪ ಅಧೀಕ್ಷಕ ಪ್ರತಾಪ್ ಸಿಂಗ್, ಪುತ್ತೂರು ಪೊಲೀಸ್ ಉಪ ಅಧೀಕ್ಷಕ ವೀರಯ್ಯ ಹಿರೇಮಠ್ ಹಾಗೂ ವಿವಿಧ ತಾಲೂಕುಗಳ ತಹಶೀಲ್ದಾರರು ಉಪಸ್ಥಿತರಿದ್ದರು.