ವಿಮಾನ ಸಂಸ್ಥೆಗೆ ಗುಜರಾತ್‌ನ 12ನೇ ತರಗತಿ ವಿದ್ಯಾರ್ಥಿಯಿಂದ ಬೆದರಿಕೆ: ಮುಂಬೈ ಪೊಲೀಸರಿಂದ ಬಂಧನ

ಮುಂಬೈ: "ಆಕಾಸ ಏರ್‌ಲೈನ್ಸ್‌ನ ವಿಮಾನವೊಂದು ಪತನವಾಗುವುದು" ಎಂದು ಟ್ವೀಟ್ ಮಾಡಿದ್ದ ಗುಜರಾತ್‌ನ 12ನೇ ತರಗತಿಯ ವಿದ್ಯಾರ್ಥಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ಆ ಟ್ವೀಟ್ ನಂತರ ಖಾಸಗಿ ವಿಮಾನ ಯಾನ ಸಂಸ್ಥೆಯು ಮುಂಬೈನ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿತ್ತು. ಈ ದೂರನ್ನು ಆಧರಿಸಿ ಅಪರಿಚಿತರ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 505 (ಸಾರ್ವಜನಿಕ ದುರ್ನಡತೆಯಾಗುವ ಹೇಳಿಕೆ) ಹಾಗೂ ಸೆಕ್ಷನ್ 506(2) (ಅಪರಾಧದ ಉದ್ದೇಶ) ಅಡಿ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
18 ವರ್ಷದ ವಿದ್ಯಾರ್ಥಿಯು "ಆಕಾಸ ಏರ್ ಬೋಯಿಂಗ್ 737 ಮ್ಯಾಕ್ಸ್ ಪತನಗೊಳ್ಳಲಿದೆ" ಎಂದು ಟ್ವೀಟ್ ಮಾಡಿದ್ದ ಎಂದು ಅವರು ಹೇಳಿದ್ದಾರೆ.
ಪೊಲೀಸರು ತನಿಖೆಯ ಸಂದರ್ಭದಲ್ಲಿ ಆತನ ಟ್ವೀಟ್ ಗುಜರಾತ್‌ನ ಸೂರತ್ ಐಪಿ ವಿಳಾಸ ಹೊಂದಿರುವುದವನ್ನು ಪತ್ತೆ ಹಚ್ಚಿದ್ದು, ಇದರ ಬೆನ್ನಿಗೇ ತಂಡವೊಂದನ್ನು ಅಲ್ಲಿಗೆ ಕಳಿಸಿ ಮಾರ್ಚ್ 27ರಂದು ವಿದ್ಯಾರ್ಥಿಯನ್ನು ಬಂಧಿಸಲಾಯಿತು ಎಂದು ಅವರು ತಿಳಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ, ನನಗೆ ವಿಮಾನದ ಕುರಿತು ತಿಳಿದುಕೊಳ್ಳುವ ಆಸಕ್ತಿಯಿತ್ತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಇಂತಹ ಪೋಸ್ಟ್ ಮಾಡುವುದರಿಂದ ಉಂಟಾಗುವ ಪರಿಣಾಮಗಳ ಬಗ್ಗೆ ಅರಿವಿರಲಿಲ್ಲ ಎಂದು ಆರೋಪಿಯು ತಿಳಿಸಿದ್ದಾನೆ ಎಂದು ಅಧಿಕಾರಿಯು ತಿಳಿಸಿದ್ದಾರೆ. ನನ್ನ ಉದ್ದೇಶ ಗಾಬರಿ ಹುಟ್ಟಿಸುವುದಾಗಿರಲಿಲ್ಲ ಎಂದೂ ಆ ವಿದ್ಯಾರ್ಥಿ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಒಂದು ದಿನದ ವಿಚಾರಣೆಯ ನಂತರ ಆರೋಪಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ರೂ. 5,000 ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.







