ಸಾತನೂರಿನಲ್ಲಿ ಜಾನುವಾರು ವ್ಯಾಪಾರಿಯ ಹತ್ಯೆಗೆ ಸಿಎಂ, ಗೃಹ ಸಚಿವರೇ ಹೊಣೆ: ಡಿ.ಕೆ.ಶಿವಕುಮಾರ್
''ಮೃತನ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಬೇಕು''

ಬೆಂಗಳೂರು, ಎ.3: ಕನಕಪುರದ ಸಾತನೂರಿನಲ್ಲಿ ‘ನೈತಿಕ ಪೊಲೀಸ್ ಗಿರಿ’ ನೆಪದಲ್ಲಿ ಒಬ್ಬನ ಕೊಲೆಯಾಗಿದ್ದು, ಕೊಲೆಗೆ ಕಾರಣರಾದ ವ್ಯಕ್ತಿ ಬಿಜೆಪಿ ನಾಯಕರಿಗೆ ಆಪ್ತನಾಗಿದ್ದಾನೆ. ಈ ನೈತಿಕ ಪೊಲೀಸ್‍ಗಿರಿಗೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರನ್ನು ಹೊಣೆ ಮಾಡುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನದ ಮೇಲೆ ಸಂಘ ಪರಿವಾರದ ಕಾರ್ಯಕರ್ತರು ದಾಳಿ ನಡೆಸಿದಾಗ ಸಿಕ್ಕಿಬಿದ್ದಿದ್ದ ವ್ಯಕ್ತಿಯ ಕೊಲೆಯಾಗಿದೆ. ನೈತಿಕ ಪೊಲೀಸ್‍ಗಿರಿ ನೆಪದಲ್ಲಿ ನಡೆದ ಕೃತ್ಯಕ್ಕೆ ಮುಸ್ಲಿಮ್ ವ್ಯಕ್ತಿ ಬಲಿಯಾಗಿದ್ದು, ಈ ಕೊಲೆಗೆ ಸರಕಾರವೇ ಕಾರಣ. ಕೂಡಲೇ ಮುಖ್ಯಮಂತ್ರಿ ಹಾಗೂ ಗೃಹಸಚಿವರು ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅಲ್ಲದೆ, ಮೃತನ ಕುಟುಂಬಕ್ಕೆ 25ಲಕ್ಷ ರೂ. ಪರಿಹಾರ ನೀಡಬೇಕು’ ಎಂದು ಒತ್ತಾಯಿಸಿದರು.
‘ಹತ್ಯೆಯಾದ ವ್ಯಕ್ತಿ ಬಳಿ 2ಲಕ್ಷ ರೂ.ನೀಡುವಂತೆ ಪೀಡಿಸಿ ಕೊಲ್ಲಲಾಗಿದೆ. ಬಿಜೆಪಿಯ ಕಾರ್ಯಕರ್ತ, ಸಹಪಾಠಿಯೇ ಕೊಲೆ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ತೊಂದರೆ ಕೊಡುವ ಕೆಲಸವಾಗುತ್ತಿದ್ದು, ಈ ರೀತಿ ರಾಜ್ಯದಲ್ಲಿ ಗೊಂದಲದ ವಾತಾವರಣ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ. ಹತ್ಯೆ ಮಾಡಿರುವವರು ನಿಮ್ಮ ಕಾರ್ಯಕರ್ತನೋ, ಆತ್ಮೀಯನೋ ಅಂತಹವರ ವಿರುದ್ಧ ಕೂಡಲೇ ಕ್ರಮ ಜರುಗಿಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಶಿವಕುಮಾರ್ ಹರಿಹಾಯ್ದರು.