ಬೆಂಗಳೂರು | ಟೈರ್ ಸ್ಫೋಟಗೊಂಡು ದ್ವಿಚಕ್ರ ವಾಹನ ಅಪಘಾತ: ಯುವತಿ ಮೃತ್ಯು
ಬೆಂಗಳೂರು: ಚಲಿಸುತ್ತಿದ್ದ ವೇಳೆ ದ್ವಿಚಕ್ರ ವಾಹನದ ಟೈರ್ ಸ್ಫೋಟಗೊಂಡ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ ಟೆಕ್ಕಿಯೊಬ್ಬರು ಮೃತಪಟ್ಟಿರುವ ಘಟನೆ ನಗರದ ಹೊಸಕೆರೆಹಳ್ಳಿಯ ನೈಸ್ ಟೋಲ್ ಬಳಿ ವರದಿಯಾಗಿದೆ.
ಸುಲೋಚನ (24) ಮೃತ ಯುವತಿ ಎಂದು ತಿಳಿದು ಬಂದಿದೆ.
ಅಪಘಾತದಲ್ಲಿ ಯುವತಿಯ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮತ್ತೋರ್ವ ಸವಾರ ಆನಂದ್ ಎಂಬವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಸಾಫ್ಟ್‌ವೇರ್ ಉದ್ಯೋಗಿಗಳಾಗಿದ್ದ ಸುಲೋಚನಾ ಹಾಗೂ ಆನಂದ್ ಕೆಲಸ ಮುಗಿಸಿ ನಿನ್ನೆ ಸಂಜೆ ಕೋರಮಂಗಲದಿಂದ ಮನೆಗೆ ತಮ್ಮ ದ್ವಿಚಕ್ರ ವಾಹನದಲ್ಲಿ ವಾಪಸಾಗುತ್ತಿದ್ದರೆನ್ನಲಾಗಿದ್ದು, ಈ ವೇಳೆ ನೈಸ್ ರಸ್ತೆಯ ಟೋಲ್ ಬಳಿ ದ್ವಿಚಕ್ರ ವಾಹನದ ಹಿಂಬದಿ ಟೈರ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ.
ಸುಲೋಚನ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಕೆಂಗೇರಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ