ಮದ್ದೂರು | ಬೆ-ಮೈ ಹೆದ್ದಾರಿ ಚೆಕ್‍ಪೋಸ್ಟ್ ಬಳಿ ಕಾರು ಅಪಘಾತ: ವಾಹನ ತಪಾಸಣಾ ಸಿಬ್ಬಂದಿ ಅಪಾಯದಿಂದ ಪಾರು

ಮಂಡ್ಯ, ಎ.3: ಜಿಲ್ಲೆಯ ಗಡಿ ಭಾಗ ಮದ್ದೂರು ತಾಲೂಕಿನ ನಿಡಘಟ್ಟ ಚೆಕ್ ಪೋಸ್ಟ್ ಬಳಿ ಸೋಮವಾರ ಬೆಳಗ್ಗೆ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿ ಕಾರು ಚಾಲಕರು ಗಾಯಗೊಂಡಿದ್ದು, ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದ ಚುನಾವಣಾ ಸಿಬ್ಬಂದಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ನಿಡಘಟ್ಟ ಗಡಿ ಭಾಗದಲ್ಲಿ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್‍ವೇನಲ್ಲಿ ನಿರ್ಮಿಸಿರುವ ಚೆಕ್ ಪೋಸ್ಟ್ ನಲ್ಲಿ ಸಿಬ್ಬಂದಿ ವಾಹನಗಳ ತಪಾಸಣೆ ನಡೆಸುತ್ತಿದ್ದಾಗ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಚಾಲಕನ ನಿಯಂತ್ರಣ ತಪ್ಪಿ ಮುಂದೆ ಹೋಗುತ್ತಿದ್ದ ಮಾರುತಿ ಜೆನ್ ಕಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದು ಬಳಿಕ ಎರಡೂ ಕಾರುಗಳು ರಸ್ತೆ ವಿಭಜಕದ ಮೇಲೆ ನಿಂತಿವೆ.ಅಪಘಾತದ ತೀವ್ರತೆಗೆ ರಸ್ತೆಗೆ ಅಡ್ಡಲಾಗಿ ಇಡಲಾಗಿದ್ದ ಬ್ಯಾರಿಕೇಡ್‍ಗಳು ಸಂಪೂರ್ಣ ಜಖಂಗೊಡಿವೆ.
ಗಾಯಗೊಂಡಿರುವ ಎರಡು ಚಾಲಕರನ್ನು ಮದ್ದೂರು ಆಸ್ಪತ್ರೆಗೆ ಸೇರಿಸಲಾಗಿದ್ದು, ಮದ್ದೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





