ಬಿಜೆಪಿ ಆಡಳಿತದಲ್ಲಿ ಗಲಭೆಗಳಾಗುವುದಿಲ್ಲ ಎಂಬ ಶಾ ಹೇಳಿಕೆ: ಇದು ‘ಇನ್ನೊಂದು ಸುಳ್ಳು’ ಎಂದ ಕಪಿಲ್ ಸಿಬಲ್

ಹೊಸದಿಲ್ಲಿ,ಎ.3: ಬಿಜೆಪಿ ಆಡಳಿತದಲ್ಲಿ ಗಲಭೆಗಳು ನಡೆಯುವುದಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shah) ಅವರ ಹೇಳಿಕೆಯನ್ನು ‘ಇನ್ನೊಂದು ಸುಳ್ಳು ’ಎಂದು ಸೋಮವಾರ ಬಣ್ಣಿಸಿದ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್(Kapil Sibal) ಅವರು, ಕೇಂದ್ರ ಮತ್ತು ಕೆಲವು ರಾಜ್ಯಗಳಲ್ಲಿ ಬಿಜೆಪಿ ಸರಕಾರದಡಿ ಹಲವಾರು ಕೋಮು ಹಿಂಸಾಚಾರದ ನಿದರ್ಶನಗಳನ್ನು ಉಲ್ಲೇಖಿಸಿದರು.
ರವಿವಾರ ಬಿಹಾರದ ನವಾಡಾ ಜಿಲ್ಲೆಯ ಹಿಸುವಾದಲ್ಲಿ ಬಹಿರಂಗ ಸಭೆಯಲ್ಲಿ ಮಾತನಾಡಿದ ಸಂದರ್ಭ ಶಾ,‘ಬಿಹಾರದಲ್ಲಿ 40ಕ್ಕೆ 40 ಸ್ಥಾನಗಳನ್ನು ನೀಡುವ ಮೂಲಕ 2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಮರಳುವಂತೆ ಮಾಡಿ ಮತ್ತು 2025ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದಲ್ಲಿ ಸರಕಾರವನ್ನು ರಚಿಸಲು ನೆರವಾಗಿ. ಗಲಭೆಕೋರರನ್ನು ತಲೆಕೆಳಗಾಗಿ ನೇತು ಹಾಕುವ ಕೆಲಸವನ್ನು ಬಿಜೆಪಿಯು ಮಾಡಲಿದೆ’ ಎಂದು ಹೇಳಿದ್ದರು. ‘ನಮ್ಮ ಆಡಳಿತದಡಿ ಗಲಭೆಗಳು ನಡೆಯುವುದಿಲ್ಲ’ ಎಂದೂ ಅವರು ಹೇಳಿಕೊಂಡಿದ್ದರು.
ಶಾ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಬಲ್, ಎನ್‌ಸಿಆರ್‌ಬಿ ಅಂಕಿಅಂಶಗಳಂತೆ 2014-2020ರ ನಡುವೆ 5,415 ಕೋಮು ಗಲಭೆಗಳು ನಡೆದಿವೆ ಎಂದು ಬೆಟ್ಟು ಮಾಡಿದರು.





