ಸಿಸೋಡಿಯ ನ್ಯಾಯಾಂಗ ಬಂಧನ ಎ. 17ರವರೆಗೆ ವಿಸ್ತರಣೆ

ಹೊಸದಿಲ್ಲಿ, ಎ. 3: ಕೇಂದ್ರೀಯ ತನಿಖಾ ದಳ (CBI) ತನಿಖೆ ನಡೆಸುತ್ತಿರುವ ದಿಲ್ಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ದಿಲ್ಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಸೋಮವಾರ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯರ(Manish Sisodia) ನ್ಯಾಯಾಂಗ ಬಂಧನವನ್ನು ಇನ್ನೂ ಎರಡು ವಾರಗಳ ಅವಧಿಗೆ ವಿಸ್ತರಿಸಿದೆ.
ವಿಶೇಷ ನ್ಯಾಯಾಧೀಶ ಎಮ್.ಕೆ. ನಾಗ್ಪಾಲ್ ಸಿಸೋಡಿಯರ(MK Nagpal Sisodia) ನ್ಯಾಯಾಂಗ ಬಂಧನವನ್ನು ಎಪ್ರಿಲ್ 17ರವರೆಗೆ ವಿಸ್ತರಿಸಿದರು.
ಸಿಸೋಡಿಯರ ಹಾಲಿ ನ್ಯಾಯಾಂಗ ಬಂಧನ ಅವಧಿಯು ಕೊನೆಗೊಳ್ಳುತ್ತಿರುವಂತೆಯೇ, ಅವರನ್ನು ಸೋಮವಾರ ತಿಹಾರ್ ಜೈಲಿನಿಂದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಕಳೆದ ವಾರ ನ್ಯಾಯಾಧೀಶ ನಾಗ್ಪಾಲ್, ಸಿಸೋಡಿಯರಿಗೆ ಜಾಮೀನು ನಿರಾಕರಿಸಿದ್ದರು. ಅವರ ವಿರುದ್ಧ ಮಾಡಲಾಗಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿವೆ; ಪ್ರಕರಣದ ಈ ಹಂತದಲ್ಲಿ ಅವರು ಜಾಮೀನು ಬಿಡುಗಡೆಗೆ ಅರ್ಹರಲ್ಲ, ಯಾಕೆಂದರೆ ಅವರ ಬಂಧನ ಫೆಬ್ರವರಿ 26ರಲ್ಲಷ್ಟೇ ಆಗಿದೆ ಎಂದು ನ್ಯಾಯಾಧೀಶರು ತನ್ನ ತೀರ್ಪಿನಲ್ಲಿ ಹೇಳಿದ್ದರು.
ಪ್ರಕರಣದಲ್ಲಿ ಸಿಸೋಡಿಯ ವಹಿಸಿದ್ದಾರೆನ್ನಲಾದ ಪಾತ್ರದ ಕುರಿತ ತನಿಖೆ ಇನ್ನೂ ಪೂರ್ಣಗೊಂಡಿಲ್ಲ ಮತ್ತು ಈ ಪ್ರಕರಣದಲ್ಲಿ ಶಾಮೀಲಾಗಿರುವ ಕೆಲವು ಸಹ ಆರೋಪಿಗಳು ವಹಿಸಿದ್ದಾರೆನ್ನಲಾಗಿರುವ ಪಾತ್ರಗಳ ಬಗ್ಗೆ ತನಿಖೆ ಈಗಷ್ಟೇ ನಡೆಯುತ್ತಿದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದರು.
ಜಾಮೀನು ಕೋರಿ ದಿಲ್ಲಿ ಹೈಕೋರ್ಟ್ ಗೆ : ಆಪ್
ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯರಿಗೆ ವಿಚಾರಣಾ ನ್ಯಾಯಾಲಯವೊಂದು ಜಾಮೀನು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಆಮ್ ಆದ್ಮಿ ಪಕ್ಷ (APP)ವು ಜಾಮೀನು ಕೋರಿ ದಿಲ್ಲಿ ಹೈಕೋರ್ಟ್ ಗೆ ಹೋಗುವುದು ಎಂದು ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹೇಳಿದ್ದಾರೆ.
ದಿಲ್ಲಿ ಮದ್ಯ ನೀತಿ ಪ್ರಕರಣದಲ್ಲಿ ಸಿಬಿಐ ಸಿಸೋಡಿಯರನ್ನು ಫೆಬ್ರವರಿ 26ರಂದು ಬಂಧಿಸಿದೆ. ಅವರನ್ನು ತಿಹಾರ್ ಜೈಲಿನಲ್ಲಿ ಇಡಲಾಗಿತ್ತು. ಬಳಿಕ, ಮಾರ್ಚ್ 9ರಂದು ಅನುಷ್ಠಾನ ನಿರ್ದೇಶನಾಲಯವು ಇದೇ ಪ್ರಕರಣದಲ್ಲಿ ಸಿಸೋಡಿಯರನ್ನು ತಿಹಾರ್ ಜೈಲಿನಿಂದ ಬಂಧಿಸಿದೆ.







