ತರೀಕೆರೆ ಕ್ಷೇತ್ರದಿಂದ ಎಚ್.ಎಂ.ಗೋಪಿಕೃಷ್ಣಗೆ ಟಿಕೆಟ್ ನೀಡುವಂತೆ ಆಗ್ರಹಿಸಿ ಬೆಂಗಳೂರಿನ ಕಾಂಗ್ರೆಸ್ ಕಚೇರಿ ಮುಂದೆ ಧರಣಿ

ಬೆಂಗಳೂರು, ಎ.3: ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರಿನ ತರೀಕೆರೆ ಕ್ಷೇತ್ರದಿಂದ ಎಚ್.ಎಂ. ಗೋಪಿ ಕೃಷ್ಣಗೆ ಕಾಂಗ್ರೆಸ್ ಟಿಕೆಟ್ ನೀಡುವಂತೆ ಆಗ್ರಹಿಸಿ ಮಡಿವಾಳ ಸಮುದಾಯದವರು ಹಾಗೂ ಬೆಂಬಲಿಗರು ಕೆಪಿಸಿಸಿ ಕಚೇರಿ ಎದುರು ಸೋಮವಾರ ಧರಣಿ ನಡೆಸಿದರು.
ತರೀಕೆರೆ ಕ್ಷೇತ್ರಕ್ಕೆ ಮತ್ತೊಬ್ಬ ಟಿಕೆಟ್ ಆಕಾಂಕ್ಷಿ ಶ್ರೀನಿವಾಸ್‍ಗೆ ಅವಕಾಶ ಸಿಗುವ ಸಾಧ್ಯತೆ ಇರುವ ಕಾರಣ ಗೋಪಿಕೃಷ್ಣ ಅಭಿಮಾನಿಗಳು ಪ್ರತಿಭಟನೆ ಮೂಲಕ ಪಕ್ಷಕ್ಕೆ ಒತ್ತಡ ಹಾಕಿದ್ದು, ಇದೇ ವೇಳೆ ಓರ್ವ ಬೆಂಬಲಿಗನೊಬ್ಬ ಗೋಪಿಕೃಷ್ಣ ಅವರಿಗೆ ಟಿಕೆಟ್ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದು, ವಿಷ ಸೇವಿಸಲು ಯತ್ನಿಸಿದ ಘಟನೆಯೂ ನಡೆದಿದೆ. ಇನ್ನು ಸ್ಥಳದಲ್ಲಿದ್ದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ, ಈ ರೀತಿಯ ಪ್ರತಿಭಟನೆಯಿಂದ ಪ್ರಯೋಜನವಿಲ್ಲ ಎಂದು ತಿಳಿಹೇಳಿದ್ದಾರೆ.
ಈ ವೇಳೆ ಮಾತನಾಡಿದ ಮಡಿವಾಳರ ಸಂಘದ ಅಧ್ಯಕ್ಷ ನಂಜಪ್ಪ, ‘ಈ ಹಿಂದೆ ಮಡಿವಾಳ ಸಮುದಾಯಕ್ಕೆ ತರೀಕೆರೆಯಿಂದ ಟಿಕೆಟ್ ನೀಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದ್ದರು. ಒಂದು ವಿಧಾನಸಭೆ ಟಿಕೆಟ್, ಮತ್ತೊಂದು ಪರಿಷತ್ ಟಿಕೆಟ್ ಕೊಡುವುದಾಗಿ ಭರವಸೆ ಕೊಟ್ಟಿದ್ದರು. ಹೀಗೆ ಕೊಟ್ಟ ಮಾತಿನಂತೆ ತರೀಕೆರೆಯಲ್ಲಿ ಮಡಿವಾಳ ಸಮುದಾಯಕ್ಕೆ ಟಿಕೆಟ್ ನೀಡಬೇಕು. ಗೋಪಿಕೃಷ್ಣಗೆ ಟಿಕೆಟ್ ಸಿಗಬೇಕು’ ಎಂದು ಆಗ್ರಹಿಸಿದರು.
ಈ ವಿಚಾರವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಪ್ರತಿಕ್ರಿಯಿಸಿದ್ದು, ‘ತರೀಕೆರೆ ಕ್ಷೇತ್ರದಿಂದ ಟಿಕೆಟ್ ಯಾರಿಗೆ ಎಂದು ಇನ್ನೂ ಅಂತಿಮವಾಗಿಲ್ಲ. ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಎರಡನೆ ಪಟ್ಟಿ ತೀರ್ಮಾನವಾಗಲಿದ್ದು, ಈಗಾಗಲೇ ಹೆಸರುಗಳು ಶಿಫಾರಸು ಮಾಡಲಾಗಿದೆ. ಶೀಘ್ರದಲ್ಲೇ ಪಟ್ಟಿ ಪ್ರಕಟಿಸಲಾಗುವುದು ಎಂದು ಹೇಳಿದರು.
.jpg)







