ನಮ್ಮ ಮೆಟ್ರೋ ನಿಲ್ದಾಣಕ್ಕೆ ‘ಸರ್ ಮಿರ್ಝಾ ಇಸ್ಮಾಯಿಲ್’ ಹೆಸರಿಡಲು ಆಗ್ರಹ

ಬೆಂಗಳೂರು, ಎ.3: ರಾಜಧಾನಿ ಬೆಂಗಳೂರಿನ ನಮ್ಮ ಮೆಟ್ರೋ ವೆಲ್ಲರಾ ಜಂಕ್ಷನ್‍ಗೆ ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಝಾ ಇಸ್ಮಾಯಿಲ್ ಅವರ ಹೆಸರನ್ನು ನಾಮಕಾರಣ ಮಾಡಬೇಕೆಂದು ಅಂಜುಮನ್-ಎ-ಇಮಾಮಿಯಾ ಸಂಘಟನೆ ಒತ್ತಾಯ ಮಾಡಿದೆ.
ಸೋಮವಾರ ನಗರದ ಬಿಎಂಬಿಎಂಆರ್‍ಸಿಎಲ್ ಎಂಡಿ ಅಜುಂ ಪರ್ವೇಝ್ ಅವರಿಗೆ ಮನವಿ ಪತ್ರ ಸಲ್ಲಿಸಿದ ಅಂಜುಮನ್-ಎ-ಇಮಾಮಿಯಾ ಸಂಘಟನೆಯ ಸದಸ್ಯರು, ಬೆಂಗಳೂರು ಅಭಿವೃದ್ಧಿಗೆ ಕನಸು ಕಂಡಿದ್ದ, ರಾಜ್ಯಕ್ಕೆ ಹಲವು ಕೊಡುಗೆ ನೀಡಿರುವ ಸರ್ ಮಿರ್ಝಾಇಸ್ಮಾಯಿಲ್ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ನಾಮಕಾರಣ ಮಾಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅಂಜುಮನ್-ಎ-ಇಮಾಮಿಯಾ ಸಂಘಟನೆಯ ಅಧ್ಯಕ್ಷ ಸೆಯ್ಯದ್ ಝಮೀನ್ ರಝಾ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಮಿರ್ಝಾಇಸ್ಮಾಯಿಲ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿಯಾಗಿ ಮಾಡಿಕೊಂಡರು. 1926ರಲ್ಲಿ ದಿವಾನರನ್ನಾಗಿ ನೇಮಿಸಿದರು. ಆನಂತರ ಸಕ್ಕರೆ ಕಾರ್ಖಾನೆ, ಕಾಗದ ಕಾರ್ಖಾನೆ, ಎಂಎಸ್‍ಐಎಲ್ ಸ್ಥಾಪಿಸಿದ ಅವರು, ತಿಪ್ಪಗೊಂಡನಹಳ್ಳಿ ಜಲಾಶಯ ಕಟ್ಟಿ ಬೆಂಗಳೂರು ನಗರದ ಜನರಿಗೆ ಕುಡಿಯುವ ನೀರನ್ನು ಒದಗಿಸಿದರು. 30 ಸಾವಿರ ಕೆರೆಗಳ ನಿರ್ಮಾಣ ಮಾಡಿ ಲಕ್ಷಾಂತರ ಎಕರೆ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಿಕೊಟ್ಟಿದ್ದಾರೆ. ಅದರಲ್ಲೂ ಸಂಸ್ಕೃತ ಮತ್ತು ಕನ್ನಡವನ್ನು ಕಡ್ಡಾಯವಾಗಿ ಕಲಿಯಬೇಕು ಎಂದು ಆದೇಶಿಸಿದ್ದರು ಎಂದು ಹೇಳಿದರು.
ಅಷ್ಟೇ ಅಲ್ಲದೆ, ಬೆಂಗಳೂರಿನ ಸರಕಾರಿ ಪಿಂಗಾಣಿ ಕಾರ್ಖಾನೆ, ಭದ್ರಾವತಿಯ ಸಿಮೆಂಟ್ ಮತ್ತು ಕಾಗದದ ಕಾರ್ಖಾನೆ, ಬೆಂಕಿ ಕಾರ್ಖಾನೆ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಮಿರ್ಝಾ ಇಸ್ಮಾಯಿಲ್ ಅವರು. ಇಂತಹ ವ್ಯಕ್ತಿತ್ವವನ್ನು ಮತ್ತಷ್ಟು ದಿನಗಳ ಉಳಿಸಿಕೊಳ್ಳಲು ಬೆಂಗಳೂರಿನ ವೆಲ್ಲರಾ ಜಂಕ್ಷನ್‍ನಲ್ಲಿ ನಿರ್ಮಾಣವಾಗುತ್ತಿರುವ ಮೆಟ್ರೋ ನಿಲ್ದಾಣಕ್ಕೆ ಮಿರ್ಝಾ ಇಸ್ಮಾಯಿಲ್ ಹೆಸರು ನಾಮಕಾರಣ ಮಾಡಬೇಕು ಎಂದು ಒತ್ತಾಯಿಸಿದರು.
ಈಸಂದರ್ಭದಲ್ಲಿ ಸರ್ ಮಿರ್ಝಾ ಇಸ್ಮಾಯಿಲ್ ಅವರ ಮೊಮ್ಮಗ ಅಲಿ ಮಝೀದ್ ಮಿರ್ಜಾ ಇಸ್ಮಾಯಿಲ್ ಅಲಿ, ಅಂಜುಮನ್-ಎ-ಇಮಾಮಿಯಾಕಾರ್ಯದರ್ಶಿ ಸೆಯ್ಯದ್ ಮಂಝೂರ್ ಹುಸೇನ್, ಬಖರ್ ಅಬ್ಬಾಸ್ ಅಬಿದ್, ಮಿರ್ ವಾರಿಸ್ ಅಲಿ, ಅಸ್ಗರ್ ಮಿಸ್ತ್ರೀ, ಮೀರ್ ಮುಮ್ತಾಜ್ ಅಲಿ, ಮಿರ್ಜಾ ಇಸ್ಮಾಯಿಲ್ ಅಲಿ, ಸೆಯ್ಯದ್ ಅಸದ್ ಅಬ್ಬಾಸ್, ಝೀಶನ್ ಅಲಿ ಷರೀಫ್ ಸೇರಿದಂತೆ ಪ್ರಮುಖರಿದ್ದರು.









