ಇದ್ರೀಸ್ ಪಾಷಾ ಹತ್ಯೆ ಆರೋಪ: ವಿಶೇಷ ತಂಡ ರಚನೆಗೆ ಆಗ್ರಹಿಸಿ ಡಿಜಿಪಿಗೆ ಮನವಿ

ಬೆಂಗಳೂರು, ಎ.3: ಮಂಡ್ಯ ಮೂಲದ ಜಾನುವಾರು ವ್ಯಾಪಾರಿ ಇದ್ರೀಸ್ ಪಾಷಾ ಹತ್ಯೆ ಆರೋಪ ಪ್ರಕರಣ ಸಂಬಂಧ ಆರೋಪಿಗಳ ತನಿಖೆ ನಡೆಸಲು ವಿಶೇಷ ತಂಡ ರಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಕಾಂಗ್ರೆಸ್ ಮನವಿ ಮಾಡಿದೆ.
ಸೋಮವಾರ ನಗರದ ಡಿಜಿಪಿ ಕಚೇರಿ ಭೇಟಿ ನೀಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ನೇತೃತ್ವದ ನಿಯೋಗ ಸಂಘಪರಿವಾರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುನೀತ್ ಕೆರೆಹಳ್ಳಿ ಹಾಗೂ ಆತನ ಸಹಚರರೇ ಇದ್ರೀಸ್ ಪಾಷಾ ಅವರನ್ನು ಕೊಲೆ ಮಾಡಿದ್ದಾರೆ, ಈ ಬಗ್ಗೆ ಸಾಕಷ್ಟು ಸಾಕ್ಷ್ಯಗಳು ಸಿಕ್ಕಿವೆ. ಪೊಲೀಸರು ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸಬೇಕು. ಕೊಲೆಗಾರರು ಮೊದಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ, ಹಣ ನೀಡದೇ ಇದ್ದಾಗ ಕೊಲೆ ಮಾಡಿದ್ದಾರೆ. ಕೊಲೆಗಾರರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಕನಕಪುರ, ಮಂಡ್ಯ ಭಾಗದಲ್ಲಿ ಯಾವುದೇ ಕೋಮು ದ್ವೇಷವಿಲ್ಲ, ಇಲ್ಲಿಯ ಜನರು ಒಗ್ಗಟ್ಟಿನಿಂದ ಇದ್ದಾರೆ. ಆದರೆ ಹೊರಗಿನ ವ್ಯಕ್ತಿಗಳು ಇಲ್ಲಿಗೆ ಬಂದು ಈ ಭಾಗದ ಕೋಮು ಸೌಹಾರ್ದತೆ ವಾತಾವರಣವನ್ನು ಹಾಳುಗೆಡವಲು ಯತ್ನಿಸಿದ್ದಾರೆ. ರಾಜ್ಯ ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಶಾಂತಿಗೆ ಭಂಗ ತರುತ್ತಿರುವವ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.







