ಅಧಿಕೃತ ಸಂವಹನಕ್ಕೆ ಇಂಗ್ಲಿಷ್ ಭಾಷೆ ಬಳಕೆ ಮಾಡುವುದನ್ನು ನಿಷೇಧಿಸಿದ ಇಟಲಿ

ರೋಮ್, ಎ.3: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯವರ `ಬ್ರದರ್ಸ್ ಆಫ್ ಇಟಲಿ' ಪಕ್ಷ ಪ್ರಸ್ತಾಪಿಸಿರುವ ಹೊಸ ನಿಯಮದಂತೆ, ಇಂಗ್ಲಿಷ್ ಅಥವಾ ಇತರ ವಿದೇಶಿ ಭಾಷೆಗಳನ್ನು ಅಧಿಕೃತ ಸಂವಹನದ ಸಂದರ್ಭ ಬಳಸುವ ಇಟಲಿ ನಾಗರಿಕರಿಗೆ ಸುಮಾರು 82 ಲಕ್ಷ ರೂ. ದಂಡ ವಿಧಿಸಲಾಗುವುದು.
ಸಂಸತ್ತಿನ ಕೆಳಮನೆಯ ಸದಸ್ಯ ಫಾಬಿಯೊ ರಾಂಪೆಲಿ ಮಂಡಿಸಿದ ಮಸೂದೆಯನ್ನು ಪ್ರಧಾನಿ ಜಾರ್ಜಿಯಾ ಮೆಲೋನಿ ಅನುಮೋದಿಸಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ. ಹೊಸ ಕಾನೂನಿನಲ್ಲಿ ಎಲ್ಲಾ ಭಾಷೆಗಳನ್ನೂ ಸೇರಿಸಲಾಗಿದ್ದರೂ, ಇಂಗ್ಲಿಷ್ ಭಾಷೆಯು ಇಟಾಲಿಯನ್ ಭಾಷೆಗೆ ಮಾರಕವಾಗಿದೆ ಮತ್ತು ಅವಮಾನಿಸುತ್ತದೆ ಎಂದು ವಿಶೇಷವಾಗಿ ಉಲ್ಲೇಖಿಸಲಾಗಿದೆ.
ಸಾರ್ವಜನಿಕ ಆಡಳಿತದಲ್ಲಿ ಹುದ್ದೆ ಹೊಂದಿರುವ ವ್ಯಕ್ತಿಯು ಇಟಾಲಿಯನ್ ಭಾಷೆಯ ಲಿಖಿತ ಮತ್ತು ಮೌಖಿಕ ಜ್ಞಾನವನ್ನು ಹೊಂದಿರಬೇಕು. ವಿದೇಶದ ಸಂಸ್ಥೆಗಳು ತಮ್ಮ ಆಂತರಿಕ ಕಾರ್ಯನೀತಿ ಹಾಗೂ ಉದ್ಯೋಗಿಗಳ ಗುತ್ತಿಗೆಯ ಒಪ್ಪಂದ ಪತ್ರದ ಇಟಾಲಿಯನ್ ಭಾಷೆಯ ಆವೃತ್ತಿಯನ್ನೂ ಹೊಂದಿರಬೇಕು. ಎಲ್ಲಾ ಕಚೇರಿಗಳಲ್ಲೂ ಇಟಾಲಿಯನ್ ಭಾಷೆಯನ್ನು ಪ್ರಾಥಮಿಕ ಭಾಷೆಯಾಗಿ ಬಳಸಬೇಕು ಎಂದು ಕಾನೂನಿನಲ್ಲಿ ಸ್ಪಷ್ಟಪಡಿಸಲಾಗಿದೆ.





