ಎಸ್‌ಸಿಡಿಸಿಸಿ ಬ್ಯಾಂಕ್‌ಗೆ 61.38 ಕೋಟಿ ರೂ. ಲಾಭ: ಡಾ.ರಾಜೇಂದ್ರ ಕುಮಾರ್
ಬ್ಯಾಂಕ್ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ

ಮಂಗಳೂರು: ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್(ಎಸ್‌ಸಿಡಿಸಿಸಿ ಬ್ಯಾಂಕ್) ಮಾರ್ಚ್ 2023ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ 61.38 ಕೋಟಿ ರೂ.
ಲಾಭ ಗಳಿಸಿದೆ. ಇದು ಬ್ಯಾಂಕಿನ 109 ವರ್ಷಗಳ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಎಂದು ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ನಗರದ ಎಸ್‌ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಮಾರ್ಚ್ 2023ಕ್ಕೆ ಅಂತ್ಯ ವಾದ ಆರ್ಥಿಕ ವರ್ಷದಲ್ಲಿ ತನ್ನ 111 ಶಾಖೆಗಳ ಮೂಲಕ 61.38 ಕೋಟಿ ರೂ. ಲಾಭ ಗಳಿಸಿದೆ. ಇದು ಕಳೆದ ವರ್ಷದ ಲಾಭ (ರೂ.50.49 ಕೋಟಿ ರೂ.)ಕ್ಕಿಂತ ಶೇ.21.57 ಅಧಿಕ. ಬ್ಯಾಂಕ್ ಆರ್ಥಿಕ ವರ್ಷದಲ್ಲಿ 13,512 ಕೋಟಿ ರೂ.ಗಳ ಒಟ್ಟು ವ್ಯವಹಾರ ದಾಖಲಿಸಿ ಹೊಸ ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನ ಒಟ್ಟು ವ್ಯವಹಾರಕ್ಕಿಂತ ಈ ಬಾರಿ ಶೇ.16.40 ಏರಿಕೆ ಕಂಡಿದೆ. 2023-24ನೇ ಸಾಲಿನಲ್ಲಿ 15,000 ಕೋಟಿ ರೂ. ವ್ಯವಹಾರದ ಗುರಿ
ಯನ್ನು ಬ್ಯಾಂಕ್ ಹೊಂದಿದೆ ಎಂದವರು ತಿಳಿಸಿದ್ದಾರೆ.
6,368.50 ಕೋಟಿ ರೂ. ಠೇವಣಿ:
ಠೇವಗಳ ಸಂಗ್ರಹದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರದ ಯಾವುದೇ ಠೇವಣಾತಿ ಇಲ್ಲದೆಯೂ ಬ್ಯಾಂಕ್ ತನ್ನ 111 ಶಾಖೆಗಳ ಮುಖಾಂತರ ಒಟ್ಟು 6,368.50 ಕೋಟಿ ರೂ. ಠೇವ ಸಂಗ್ರಹಿಸಿ ಸಾಧನೆ ಗೈದಿದೆ. ಈ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್ ಠೇವಣಿ ಸಂಗ್ರಹದಲ್ಲಿ ರಾಜ್ಯದ ಇತರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗಳ ಪೈಕಿ ಮುಂಚೂಯಲ್ಲಿದೆ. ಕಳೆದ ಸಾಲಿನ ಠೇವ ಸಂಗ್ರಹಕ್ಕಿಂತ ಈ ಬಾರಿ ಶೇ.12.59 ಏರಿಕೆಯಾಗಿದೆ ಎಂದವರು ತಿಳಿಸಿದ್ದಾರೆ.
5,695.55 ಕೋ.ರೂ. ಮುಂಗಡ:
ಕೃಷಿ ಅಭಿವೃದ್ಧಿಗೆ ಅಲ್ಪಾವಧಿ ಸಾಲವಾಗಿ 1,681.46 ಕೋಟಿ ರೂ, ಮಧ್ಯಮಾವಧಿ ಸಾಲ 150 .20 ಕೋಟಿ ರೂ., ಹೀಗೆ ಕೃಷಿ ಕ್ಷೇತ್ರಕ್ಕೆ ಒಟ್ಟು 1,831.66 ಕೋಟಿ ರೂ. ಸಾಲ ನೀಡಲಾಗಿದೆ. ಕೃಷಿಯೇತರ ಸಾಲವಾಗಿ 3,863.89 ಕೋಟಿ ರೂ. ನೀಡಿದ್ದು, ಒಟ್ಟು 5,695.55 ಕೋಟಿ ರೂ. ಮುಂಗಡ ನೀಡಲಾಗಿದೆ. ಪ್ರಸಕ್ತ ಸಾಲಿನ ಕೃಷಿ ಹಾಗೂ ಕೃಷಿ ಯೇತರ ಸಾಲಗಳ ಹೊರಬಾಕಿ 7,143.38 ಕೋಟಿ ರೂ.ಗಳಾಗಿವೆ. ಕಳೆದ ವರ್ಷದ ಹೊರಬಾಕಿ ಸಾಲ 5,956.87 ಕೋಟಿ ರೂ.ಗಳಾಗಿದ್ದು, ಕಳೆದ ಸಾಲಿಗಿಂತ ಈ ಬಾರಿ ಶೇ.19.92 ಏರಿಕೆಯಾಗಿರುತ್ತದೆ ಎಂದವರು ವಿವರಿಸಿದರು.
ಕೃಷಿ ಸಾಲ ಮರುಪಾವತಿಯಲ್ಲಿ ಶೇ.100ರ ಸಾಧನೆ:
ಬ್ಯಾಂಕ್ ನೀಡಿದ ಎಲ್ಲ ಕೃಷಿ ಸಾಲಗಳು ಶೇ.100ರ ಮರುಪಾವತಿಯಾಗಿದೆ. ಇಂತಹ ಸಾಧನೆಯನ್ನು ಕಳೆದ 28 ವರ್ಷಗಳಿಂದ ಸತತವಾಗಿ ಮಾಡಿರುವುದು ರಾಷ್ಟ್ರೀಯ ದಾಖಲೆಯಾಗಿದೆ. ಬ್ಯಾಂಕ್‌ಗೆ ಒಟ್ಟು 1,054 ಸಂಘಗಳು ಸದಸ್ಯರಾಗಿವೆ. ಇವುಗಳ ಪಾಲು ಬಂಡವಾಳ 268.64 ಕೋಟಿ ರೂ. ಆಗಿರುತ್ತದೆ. ದುಡಿಯುವ ಬಂಡವಾಳ 9,859.10 ಕೋಟಿ ರೂ. ಆಗಿದ್ದು, ಕಳೆದ ವರ್ಷಕ್ಕಿಂತ (ರೂ.8,668.90 ಕೋಟಿ) ಶೇ.13.73 ರಷ್ಟು ಏರಿಕೆ ಕಂಡಿದೆ ಎಂದವರು ತಿಳಿಸಿದರು.
ರುಪೇ ಕಿಸಾನ್ ಕ್ರೆಡಿಟ್ ಕಾರ್ಡ್:
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ಮಂಗಳ ಕಿಸಾನ್ ಕ್ರೆಡಿಟ್ ಕಾರ್ಡ್ ಖಾತೆಯನ್ನು ಹೊಂದಿರುವ ರೈತರಿಗೆ ಬ್ಯಾಂಕ್ ರುಪೇ ಕಿಸಾನ್ ಕಾರ್ಡನ್ನು ನೀಡಿದೆ. ಈಗಾಗಲೇ 1,32,291 ರುಪೇ ಕಿಸಾನ್ ಕಾರ್ಡ್‌ಗಳನ್ನು ರೈತರಿಗೆ ವಿತರಿಸಲಾಗಿದೆ. 72,299 ರುಪೇ ಡೆಬಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ನ ಇತರ ಗ್ರಾಹಕರಿಗೆ ನೀಡಲಾಗಿದೆ ಎಂದರು.
ಬ್ಯಾಂಕಿನ ಸಾಧನೆ
ಬ್ಯಾಂಕಿಗೆ 20 ಬಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ, 18 ಬಾರಿ ನಬಾರ್ಡ್ ಪ್ರಶಸ್ತಿ ದೊರೆತಿದೆ. ಎರಡು ಬಾರಿ ಪಾಂಟಿಯರ್ ಇನ್ ಕೋ-ಆಪರೇಟಿವ್ ಬ್ಯಾಂಕಿಂಗ್ ರಾಷ್ಟ್ರೀಯ ಪ್ರಶಸ್ತಿಯಿಂದ ಬ್ಯಾಂಕ್ ಪುರಸ್ಕೃತಗೊಂಡಿದೆ. ಎರಡು ಬಾರಿ ಪ್ರತಿಷ್ಠಿತ ಬ್ಯಾಂಕ್ ಬ್ಲೂ ರಿಬ್ಬನ್ ಪ್ರಶಸ್ತಿ ಲಭಿಸಿದೆ.
ಕೇಂದ್ರ ಸರಕಾರದ ಮಹತ್ತರ ಯೋಜನೆಯಾದ ‘ಅಟಲ್ ಪಿಂಚಣಿ ಯೋಜನೆ’ಯನ್ನು ಬ್ಯಾಂಕ್ ಸಮರ್ಪಕವಾಗಿ ಜಾರಿಗೆ ತಂದಿದ್ದು, ಈ ಯೋಜನೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಚಂದಾದಾರರನ್ನು ನೋಂದಾಯಿಸಿ ವರದಿ ವರ್ಷದಲ್ಲಿ 2 ಬಾರಿ ಭಾರತ ಸರಕಾರದ ಹಣಕಾಸು ಸಚಿವಾಲಯದಿಂದ ಪ್ರಶಸ್ತಿಗೆ ಪಾತ್ರವಾಗಿದೆ. ಸ್ವ ಸಹಾಯ ಗುಂಪುಗಳ ಸಮರ್ಪಕ ಅನುಷ್ಠಾನದಲ್ಲಿ ಬ್ಯಾಂಕ್‌ಗೆ ರಾಜ್ಯದಲ್ಲೇ ಪ್ರಥಮ ಸ್ಥಾನ. ಬ್ಯಾಂಕ್ ಒಟ್ಟು 34,099 ಗುಂಪುಗಳನ್ನು ಹೊಂದಿದೆ ಎಂದ ವರು ವಿವರಿಸಿದರು.
ಬ್ಯಾಂಕಿನ ಎಲ್ಲಾ ಶಾಖೆಗಳು ಸಂಪೂರ್ಣ:
ಗಣಕೀಕೃತೆಗೊಂಡು ಏಕಗವಾಕ್ಷಿ ಆರ್‌ಟಿಜಿಎಸ್ ವೆಲ್ತ್ ಹಾಗೂ ಕೋರ್ ಬ್ಯಾಂಕಿಂಗ್ ನಂತಹ ಉತ್ಕೃಷ್ಟ ಸೇವೆಯನ್ನು ಗ್ರಾಹಕರಿಗೆ ನೀಡುತ್ತಿದೆ. ಬ್ಯಾಂಕಿನ 17 ಶಾಖೆಗಳು ಸಂಪೂರ್ಣ ಹವಾನಿಯಂತ್ರಿತವಾಗಿದೆ.
ಗ್ರಾಹಕರ ಮನೆ ಬಾಗಿಲಿಗೆ ಬ್ಯಾಂಕ್ (Bank on Wheel) ಎನ್ನುವ ಆಶಯದೊಂದಿಗೆ ಸುಸನ್ಜಿತ ವಾಹನದಲ್ಲಿ ಎಲ್ಲ ರೀತಿಯ ಬ್ಯಾಂಕಿಂಗ್ ಸೇವೆಯನ್ನು ಹಾಗೂ ಎಟಿಎಂ ಸೌಲಭ್ಯವನ್ನು ಕಾರ್ಯರೂಪಕ್ಕೆ ತಂದ ದೇಶದ ಮೊದಲ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎನ್ನುವ ಹೆಗ್ಗಳಿಕೆಯನ್ನು ಎಸ್‌ಸಿಡಿಸಿಸಿ ಬ್ಯಾಂಕ್ ಹೊಂದಿದೆ. ಈಗಾಗಲೇ ಮಂಗಳೂರು, ಮತ್ತು ಉಡುಪಿಯಲ್ಲಿ ಮೊಬೈಲ್ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ ಎಂದು ಡಾ. ರಾಜೇಂದ್ರ ಕುಮಾರ್ ತಿಳಿಸಿದರು.
ಬ್ಯಾಂಕ್ ಸಿಬ್ಬಂದಿಗೆ ಪಿಂಚಣಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದ ರಾಜ್ಯದ ಪ್ರಥಮ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೊಡಿಯಾಲ್‌ಬೈಲ್‌ನಲ್ಲಿ ಗ್ರಾಹಕರಿಗೆ ತ್ವರಿತ ಸೇವೆಯನ್ನು ನೀಡುವ ಉದ್ದೇಶದಿಂದ ಕ್ಯಾಶ್, ಡೆಪಾಸಿಟ್ ಹಾಗೂ ಚೆಕ್ ಡೆಪಾಸಿಟ್ ಕಿಯೋಸ್ಕ್ ಯಂತ್ರಗಳನ್ನು ಅಳವಡಿಸಲಾಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ಬ್ಯಾಂಕ್ ನಿರ್ದೇಶಕರುಗಳಾದ ಎಂ.ವಾದಿರಾಜ ಶೆಟ್ಟಿ, ರಾಜು ಪೂಜಾರಿ, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್ ರೈ ಬಾಲ್ಯೋಟ್ಟು, ಅಶೋಕ್ ಕುಮಾರ್ ಶೆಟ್ಟಿ, ಮೋನಪ್ಪಶೆಟ್ಟಿ, ಕೆ.ಜೈರಾಜ್ ಬಿ ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಸಹಕಾರ ಸಂಘಗಳ ಉಪ ನಿಬಂಧಕರಾದ ರಮೇಶ್ ಎಚ್.ಎನ್., ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಹಾಗೂ ಬ್ಯಾಂಕ್ ಅಧಿಕಾರಿ ಗಳು ಉಪಸ್ಥಿತರಿದ್ದರು.
ಮುಂದಿನ ಯೋಜನೆಗಳು
ಬ್ಯಾಂಕ್ ಮುಂದಿನ ಅವಧಿಯಲ್ಲಿ 15 ಹೊಸ ಶಾಖೆಗಳನ್ನು ತೆರೆಯುವ ಯೋಜನೆ ಹಾಕಿಕೊಂಡಿದೆ. ಮಾಣಿ ಮತ್ತು ಬೆಂಗ್ರೆಯಲ್ಲಿ ಶಾಖೆ ಆರಂಭಿಸಲು ಅನುಮತಿ ದೊರೆತಿದೆ.
ಪ್ರತಿ ತಾಲೂಕಿಗೆ ಎ.ಟಿ.ಎಂ ಅಳವಡಿಕೆ:
ಈಗಾಗಲೇ 3 ತಾಲೂಕಿನ ಬ್ಯಾಂಕ್‌ನ ಮುಖ್ಯ ಶಾಖೆಗಳಿಗೆ ಎಟಿಎಂ ಅಳವಡಿಸಲಾಗಿದ್ದು, ಮುಂದೆ ಉಳಿದ 13 ತಾಲೂಕಿನ ಮುಖ್ಯ ಶಾಖೆಗಳಲ್ಲಿ ಎಟಿಎಂ ಅಳವಡಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.
ಇಮೀಡಿಯೆಟ್ ಪೇಮೆಂಟ್, ಸರ್ವಿಸ್ ಯೋಜನೆ:
ಐಎಂಪಿಎಸ್ ಯೋಜನೆಯನ್ನು ಕಾರ್ಯಗತಗೊಳಸಲು ಚಿಂತನೆ ನಡೆಸಿದೆ. ಈ ಯೋಜನೆಯಿಂದ ಗ್ರಾಹಕರು ತಮ್ಮ ಖಾತೆಯಿಂದ ಇತರ ಬ್ಯಾಂಕಿನ ಖಾತೆಗೆ ಹಣ ವರ್ಗಾಸಬಹುದು. ಇಂಟರ್‌ನೆಟ್ ಬ್ಯಾಂಕಿಂಗ್ ಸೇವೆ ಶೀಘ್ರದಲ್ಲಿ ಆರಂಭಗೊಳ್ಳಲಿದೆ.
ಭಾರತ್ ಬಿಲ್ ಪೇಮೆಂಟ್ ಸಿಸ್ಟಮ್ (ಬಿಬಿಪಿಎಸ್) ಯೋಜನೆ:
ಇದು ಜನೋಪಯೋಗಿ ಯೋಜನೆಯಾಗಿದೆ. ಇದರಿಂದ ವಿದ್ಯುತ್ ಬಿಲ್, ನೀರಿನ ಬಿಲ್, ಡಿಟಿಎಚ್ ರಿಚಾರ್ಜ್ ಇತ್ಯಾದಿ ಪಾವತಿಗಳನ್ನು ಬ್ಯಾಂಕಿನ ಶಾಖೆಗಳಲ್ಲಿ ಪಾವತಿಸಬಹುದಾಗಿದೆ.
| ಡಾ.ಎಂ.ಎನ್.ರಾಜೇಂದ್ರ ಕುಮಾರ್, ಅಧ್ಯಕ್ಷರು, ಎಸ್‌ಸಿಡಿಸಿಸಿ ಬ್ಯಾಂಕ್