ಮಾಹಿತಿ ಆಯೋಗದಿಂದಲೇ ‘ಮಾಹಿತಿ ಹಕ್ಕು ಕಾಯ್ದೆ’ ಉಲ್ಲಂಘನೆ

ಬೆಂಗಳೂರು, ಮಾ.6: ರಾಜ್ಯ ಮಾಹಿತಿ ಹಕ್ಕು ಆಯೋಗದ ನಿರ್ವಹಣೆಗೆ ಕೋಟಿಗಟ್ಟಲೇ ಹಣವನ್ನು ರಾಜ್ಯ ಸರಕಾರವು ಖರ್ಚು ಮಾಡಿದ್ದು, ಮಾಹಿತಿ ಹಕ್ಕು ಕಾಯ್ದೆಯಡಿ ಆಯೋಗದ ನಿರ್ವಹಣೆಯ ವೆಚ್ಚವನ್ನು ಒದಗಿಸುವಲ್ಲಿ ವಿಫಲವಾಗಿದೆ. ಈ ಮೂಲಕ ಮಾಹಿತಿ ಹಕ್ಕು ಕಾಯ್ದೆಯನ್ನು ರಾಜ್ಯ ಮಾಹಿತಿ ಆಯೋಗವೇ ದುರ್ಬಲಗೊಳಿಸಿರುವುದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲೇ ಬಹಿರಂಗವಾಗಿದೆ.
ಇಲಾಖೆಗಳು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 12ರ ಅನ್ವಯ ಸಾರ್ವಜನಿಕರಿಗೆ ಲಭ್ಯವಾಗುವ ರೀತಿಯಲ್ಲಿ(ವೆಬ್‍ಸೈಟ್ ಮೂಲಕ) ಅಗತ್ಯ ಮಾಹಿತಿಯನ್ನು ಪ್ರಕಟಿಸಬೇಕು. ಆದರೆ ರಾಜ್ಯ ಮಾಹಿತಿ ಆಯೋಗವು ಇದನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ.
ರಾಜ್ಯ ಮಾಹಿತಿ ಆಯೋಗದಲ್ಲಿ ವಾರ್ಷಿಕವಾರು ಸ್ವೀಕೃತವಾಗಿರುವ ದ್ವಿತೀಯ ಮೇಲ್ಮನವಿ ಅರ್ಜಿಗಳ ಸಂಖ್ಯೆ, ಅವುಗಳಲ್ಲಿ ಇತ್ಯಾರ್ಥ ಆದ ಅರ್ಜಿಗಳ ಸಂಖ್ಯೆ, ತಿರಸ್ಕರಿಸಿದ ಅರ್ಜಿಗಳ ಸಂಖ್ಯೆ, ಪ್ರಸ್ತುತ ವಿಚಾರಣೆ ಹಂತದಲ್ಲಿರುವ ಅರ್ಜಿಗಳ ಮಾಹಿತಿಯನ್ನು ಸೇರಿ ಪ್ರತಿವರ್ಷ ಆಯೋಗದ ನಿರ್ವಹಣೆಗೆ ಖರ್ಚಾಗುತ್ತಿರುವ ವಿವರಗಳನ್ನು ಆಯೋಗ ವೆಬ್‍ಸೈಟ್‍ನಲ್ಲಿ ಪ್ರಕಟಿಸಿರುವ ಕುರಿತು ಮಾಹಿತಿಯನ್ನು ಒದಗಿಸುವಂತೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಮಾಹಿತಿ ಆಯೋಗವು ಇದಕ್ಕೆ ಯಾವುದೇ ಪ್ರತ್ಯುತ್ತರವನ್ನು ನೀಡಲಿಲ್ಲ.
ಬಹುಮುಖ್ಯವಾಗಿ ರಾಜ್ಯ ಮಾಹಿತಿ ಹಕ್ಕು ಆಯೋಗದ ನಿರ್ವಹಣೆಗಾಗಿ ವಿನಿಯೋಗಿಸಿದ ಹಣದ ಬಗ್ಗೆಯೂ ಮಾಹಿತಿ ಆಯೋಗವು ಇದುವರೆಗೂ ಎಲ್ಲಯೂ ಪ್ರಕಟಿಸುತ್ತಿಲ್ಲ. ಇದು ಸಾರ್ವಜನಿಕರನ್ನು ದಿಕ್ಕು ತಪ್ಪಿಸುತ್ತಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.
.
‘ರಾಜ್ಯದ ಬಹುತೇಕ ಇಲಾಖೆಗಳಲ್ಲಿ ಭ್ರಷ್ಟಾಚಾರವು ತಾಂಡವಾಡುತ್ತಿದ್ದು, ಸರಕಾರಿ ಅಧಿಕಾರಿಗಳು ಇತ್ತೀಚ್ಚಿಗೆ ಮಾಹಿತಿಯನ್ನು ಒದಗಿಸುತ್ತಿಲ್ಲ. ಮಾಹಿತಿ ಆಯೋಗವೇ ಮಾಹಿತಿ ಹಕ್ಕು ಕಾಯ್ದೆಯನ್ನು ಉಲ್ಲಂಘನೆ ಮಾಡುತ್ತಿರುವಾಗ ಸರಕಾರದ ಅಧಿಕಾರಿಗಳು ಮಾಹಿತಿಯನ್ನು ನೀಡುತ್ತಾರೆಯೇ?’
-ಬಸವರಾಜ ಕುಂಬಾರ ಬಳಚಕ್ರ, ಮಾಹಿತಿ ಹಕ್ಕು ಕಾರ್ಯಕರ್ತ
‘ಮಾಹಿತಿ ಹಕ್ಕು ಅರ್ಜಿಯನ್ನು ಹಾಕುವಾಗ 10 ರೂ.ಪೋಸ್ಟಲ್ ಆರ್ಡರ್(ಐಪಿಓ) ಅನ್ನು ಅರ್ಜಿ ಶುಲ್ಕವಾಗಿ ಸಲ್ಲಿಸಬೇಕಾಗಿದೆ. ಆದರೆ ಬೆಂಗಳೂರಿನ ಯಾವುದೇ ಅಂಚೆ ಕಚೇರಿಗಳಲ್ಲಿ 10 ರೂ.ಗಳ ಪೋಸ್ಟಲ್ ಆರ್ಡರ್ ಅನ್ನು ನೀಡುತ್ತಿಲ್ಲ. ವಿಧಾನಸೌಧ ಬಳಿಯಿರುವ ಜನರಲ್ ಪೋಸ್ಟ್ ಆಫೀಸ್‍ನಲ್ಲಿಯೇ 10 ರೂ.ಗಳ ಐಪಿಓಗಳು ಇಲ್ಲದೆ ಇರುವುದು ಕಂಡುಬಂದಿದೆ. ನಾವು ಅರ್ಜಿ ಶುಲ್ಕವನ್ನು ಹೇಗೆ ತುಂಬುವುದು ಎಂದು ತಿಳಿಯುತ್ತಿಲ್ಲ’
-ಪ್ರದೀಪ್ ಕುಮಾರ್, ಮಾಹಿತಿ ಹಕ್ಕು ಕಾರ್ಯಕರ್ತ







