ಬದಲಾದ ಟ್ವಿಟರ್ ಲೋಗೊ: ನೀಲಿ ಹಕ್ಕಿ ಬದಲು ಕಾಣಿಸಿಕೊಂಡಿದೆ ಶ್ವಾನ!

ಕ್ಯಾಲಿಫೋರ್ನಿಯಾ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಎಲಾನ್ ಮಸ್ಕ್ (Elon Musk) ನೇತೃತ್ವದ ಟ್ವಿಟರ್ (Twitter) ತನ್ನ ನೀಲಿ ಹಕ್ಕಿ ಲೋಗೋ ಬದಲಾಯಿಸಲಾಗಿದೆ. ನೀಲಿ ಹಕ್ಕಿ ಸ್ಥಾನದಲ್ಲಿ ಈಗ "ಡಾಗ್" ಮೀಮ್ ಕಾಣಿಸಿಕೊಂಡಿದೆ.
ಈ ಕುರಿತಂತೆ ಟ್ವಿಟರ್ ಸಿಇಒ ಎಲಾನ್ ಮಸ್ಕ್ ಕೂರ ದೃಢೀಕರಿಸಿದ್ದಾರೆ ಹಾಗೂ ಮಾತು ಕೊಟ್ಟಂತೆ ಮಾಡಿರುವುದಾಗಿ ತಿಳಿಸಿದ್ದಾರೆ.
ನೀಲಿ ಬಕ್ಕಿ ಬದಲು ಈಗ ಶಿಬಾ ಇನು ಡಾಗ್ ಮೀಮ್ ಕಾಣಿಸಿಕೊಂಡಿದ್ದು, ಇದು ಡಾಗ್‌ಕಾಯಿನ್ ಕ್ರಿಪ್ಟೋಕರೆನ್ಸಿಯ ಲೋಗೊ ಕೂಡ ಆಗಿದೆ. ಈ ಲೋಗೊ ಬದಲಾವಣೆಯು ಟ್ವಿಟರ್‌ನ ವೆಬ್ ಆವೃತ್ತಿಯಲ್ಲಿ ಮಾತ್ರ ಕಾಣಿಸಿಕೊಂಡಿದೆ ಹಾಗೂ ಆ್ಯಪ್ ಆವೃತ್ತಿಯಲ್ಲಿ ಕಾಣಿಸಿಕೊಂಡಿಲ್ಲ.
ಎಲಾನ್ ಮಸ್ಕ್ ಅವರು ಮೊದಲು ಪೊಲೀಸ್ ಅಧಿಕಾರಿಯೊಬ್ಬರು ಒಂದು ದಾಖಲೆಯನ್ನು ಪರಿಶೀಲಿಸುತ್ತಿರುವ ಹಾಗೂ ಡಾಗ್ ಅದು ಹಳೆ ಫೋಟೋ ಎಂದು ಹೇಳುವ ಮೀಮ್ ಟ್ವೀಟ್ ಮಾಡಿದ್ದರು.
ತಾನು ಟ್ವಿಟರ್ ಅನ್ನು ಖರೀದಿಸುವ ಮೊದಲು ಟ್ವಿಟ್ಟರಿಗರೊಬ್ಬರೊಂದಿಗಿನ ತಮ್ಮ ಸಂವಹನದ ಸ್ಕ್ರೀನ್ ಶಾಟ್ ಕೂಡ ಶೇರ್ ಮಾಡಿದ ಎಲಾನ್, ʻಮಾತು ಕೊಟ್ಟಂತೆʼ (ಆಸ್ ಪ್ರಾಮಿಸ್ಡ್) ಎಂದು ಬರೆದಿದ್ದಾರೆ. ಈ ಸಂಭಾಷಣೆಯಲ್ಲಿ ಮಾಸ್ಕ್ ಅವರು ಹೊಸ ಪ್ಲಾಟ್‌ಫಾರ್ಮ್‌ನ ಅಗತ್ಯವಿದೆಯೇ ಎಂದು ಕೇಳಿದಾಗ ಆ ಟ್ವಿಟರಿಗ ಪ್ರತಿಕ್ರಿಯಿಸಿ, ಮಸ್ಕ್ ಅವರು ಟ್ವಿಟರ್ ಖರೀದಿಸಿ ಅದರ ನೀಲಿ ಹಕ್ಕಿ ಲೋಗೊ ಅನ್ನು ಡಾಗ್‌ಗೆ ಬದಲಿಸಬೇಕು ಎಂದಿದ್ದರು.
ಟ್ವಿಟರ್ ತನ್ನ ಲೋಗೊ ಬದಲಾಯಿಸಿದ ಬೆನ್ನಿಗೇ ಡಾಗ್‌ಕಾಯಿನ್ ಷೇರು ಮೌಲ್ಯ ಶೇ30 ರಷ್ಟು ಏರಿಕೆಯಾಗಿದೆ ಎಂದು ಬ್ಲೂಂಬರ್ಗ್ ವರದಿ ಮಾಡಿದೆ.