ಆಗ್ನೆಸ್ ಕಾಲೇಜಿನಲ್ಲಿ ಚದುರಂಗ ಸ್ಪರ್ಧೆ

ಮಂಗಳೂರು: ಮಂಗಳೂರು ನಗರದ ಸಂತ ಆಗ್ನೆಸ್ ಕಾಲೇಜಿನಲ್ಲಿ ಎ.೩ರಂದು ರಾಷ್ಟ್ರೀಯ ಮಟ್ಟದ ಚದುರಂಗ-2023 ಅಂತರ್ ಕಾಲೇಜು ಉತ್ಸವ ಜರುಗಿತು.
ಅಮೇರಿಕ ಗಾಟ್ ಟ್ಯಾಲೆಂಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಏಷ್ಯಾದ ವೇಗದ ವರ್ಣಚಿತ್ರಕಾರ ವಿಲಾಸ್ ನಾಯಕ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಾ ಬೆಳವಣಿಗೆಗೆ ಪದವಿ ವಿದ್ಯಾಭ್ಯಾಸ ಬಹಳ ಮುಖ್ಯವಾದದ್ದು, ಅಲ್ಲದೇ ಈ ಪದವಿಯು ಭವಿಷ್ಯದ ಉನ್ನತಿಯನ್ನು ನಿರ್ಧರಿಸುವ ಸಮಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಂತಾರ ಖ್ಯಾತಿಯ ನಟ ಸ್ವರಾಜ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಅವಕಾಶಗಳು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ನಾವು ಅದಕ್ಕಾಗಿ ಹುಡುಕಾಡಬೇಕು. ಒಳ್ಳೆಯ ಅವಕಾಶ ಬಂದಾಗ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ಕೊಟ್ಟರು.
ವೇದಿಕೆಯಲ್ಲಿ ಆಗ್ನೆಸ್ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಲಿಡಿಯಾ ಎಸಿ, ಪ್ರಾಂಶುಪಾಲೆ ಡಾ. ವೆನಿಸ್ಸಾ ಎಸಿ, ಆಡಳಿತಾಧಿಕಾರಿ ಕಾರ್ಮೆಲ್ ರೀಟಾ ಎಸಿ, ಉಪ-ಪ್ರಾಂಶುಪಾಲೆ ಕ್ಲಾರಾ ಎ.ಸಿ, ಕಾರ್ಯಕ್ರಮ ಸಂಯೋಜಕಿ ಡಾ.ಜುಬೈದಾ ಎಚ್, ಪದವಿ ವಿದ್ಯಾರ್ಥಿ ಪ್ರತಿನಿಧಿ ಅಡೆಲಿನ್ ರೆಂಜಾಲ್ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ಪ್ರತಿನಿಧಿ ಮಹಿಮಾ ಆನ್ನಾ ವರ್ಗೀಸ್ ಉಪಸ್ಥಿತರಿದ್ದರು.
ಈ ಸಂದರ್ಭ ವಿವಿಧ ವಿಭಾಗಗಳ ವಿದ್ಯಾರ್ಥಿ ನಾಯಕಿಯರು ಮತ್ತು ಸಿಬ್ಬಂದಿ ಸಂಯೋಜಕರು ಹಾಗೂ ವಿದ್ಯಾರ್ಥಿ ಗಳು ಭಾಗವಹಿಸಿದ್ದರು. ಚದುರಂಗ ಪರಿಕಲ್ಪನೆಯನ್ನು ಕಾಲೇಜಿನ ನೃತ್ಯ ತಂಡ ಕಲಾತ್ಮಕವಾಗಿ ಪರಿಚಯಿಸಿತು. ಡಾ.ಜುಬೈದಾ ಸ್ವಾಗತಿಸಿದರು. ವರ್ಷ ಶೆಟ್ಟಿ ಮತ್ತು ಶಾಲಿನಿ ನಿರೂಪಿಸಿದರು. ರವೀನಾ ಮಸ್ಕರೇನಸ್ ವಂದಿಸಿದರು.