ತಾರತಮ್ಯದಿಂದ ಹೆಣ್ಣು ಚೌಕಟ್ಟಿನೊಳಗೆ ಬಂಧಿಯಾಗಿಸಿದ್ದಾಳೆ: ಡಾ.ಶೋಭಾದೇವಿ

ಉಡುಪಿ, ಎ.4: ಮಹಿಳೆ ಕುಟುಂಬಕ್ಕಾಗಿ ಕೆಲಸ ಕಾರ್ಯಗಳನ್ನು ನಿರ್ವಹಿ ಸುತ್ತ ತನ್ನನ್ನು ತಾನೇ ಮರೆಯುವಷ್ಟು ಸಂಪೂರ್ಣವಾಗಿ ತನ್ನ ಜೀವನವನ್ನು ಕುಟುಂಬಕ್ಕಾಗಿ ಮೀಸಲಿರಿಸಿ ದುಡಿಯುತ್ತಿದ್ದಾಳೆ. ಗಂಡು ಹೆಣ್ಣೆಂಬ ಬೇಧ-ಬಾವ ಅವಳನ್ನು ಒಂದು ಚೌಕಟ್ಟಿನೊಳಗೆ ಬಂಧಿಯಾಗುವಂತೆ ಮಾಡಿದೆ ಎಂದು ಡಾ.ಶೋಭಾ ದೇವಿ ತಿಳಿಸಿದ್ದಾರೆ.
ಅಜ್ಜರಕಾಡು ಡಾ.ಜಿ.ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ವೇದಿಕೆ, ಎನ್‌ಎಸ್‌ಎಸ್ ಹಾಗೂ ಸಮಾಜಶಾಸ್ತ್ರ ವಿಭಾಗವು ಮಹಿಳಾ ಅಧ್ಯಯನ ಕೇಂದ್ರ ಮಂಗಳೂರು ವಿ.ವಿ. ಇದರ ಸಹಯೋಗದೊಂದಿಗೆ ಇತ್ತೀಚೆಗೆ ನಡೆದ ಲಿಂಗ ಸೂಕ್ಷ್ಮತಾ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಭಾಸ್ಕರ ಶೆಟ್ಟಿ ಎಸ್. ಮಾತನಾಡಿ, ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ. ಕುಟುಂಬಕ್ಕಾಗಿ ತನ್ನ ಸರ್ವಸ್ವವನ್ನು ಧಾರೆಯೆರೆದು ಹೆಣ್ಣು ಒಂದು ಸುಸಂಸ್ಕೃತ ಕುಟುಂಬ, ಸಮಾಜ ಕಟ್ಟುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತಿದ್ದಾಳೆ ಎಂದು ಹೇಳಿದರು.
ಮಂಗಳೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ.ಅನಿತಾ ರವಿಶಂಕರ್, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಹಾಗೂ ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಡಾ.ರಾಜೇಂದ್ರ ಕೆ., ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ರಮ್ಯಾ ವಿ., ಮಹಿಳಾ ವೇದಿಕೆ ಸಂಚಾಲಕಿ ವಾರಿಜ ಉಪಸ್ಥಿತರಿದ್ದರು. ಕಾವ್ಯ ಕಾರ್ಯಕ್ರಮ ನಿರೂಪಿಸಿದರು.