ಉಡುಪಿ: ನಾಟ್ಯಶಾಸ್ತ್ರದ 108 ಕರಣಗಳ ಪ್ರದರ್ಶನದಲ್ಲಿ ತನುಶ್ರೀ ವಿಶ್ವದಾಖಲೆ

ಉಡುಪಿ, ಎ.4: ವಿಶ್ವದಾಖಲೆಗಳ ಸರದಾರಿಣಿ ಯೋಗರತ್ನ ತನುಶ್ರೀ ಪಿತ್ರೋಡಿ (14) ನಾಟ್ಯಶಾಸ್ತ್ರದ 108 ಕರಣಗಳನ್ನು ಪ್ರದರ್ಶಿಸುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಇದು ಇವರ ಎಂಟನೇ ವಿಶ್ವದಾಖಲೆಯಾಗಿದೆ.
ಬನ್ನಂಜೆ ಶ್ರೀನಾರಾಯಣಗುರು ಆಡಿಟೋರಿಯಂನಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ತನುಶ್ರೀ ಪಿತ್ರೋಡಿ ಕಾಲು, ಕೈಗಳ ಚಲನೆ ಹಾಗೂ ದೇಹದ ಭಂಗಿಯ ಸಂಯೋಜನೆಯಾಗಿರುವ 108 ಕರಣಗಳ ಭಂಗಿಗಳನ್ನು ಕೇವಲ 3.29ನಿಮಿಷದಲ್ಲಿ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದರು. ತನುಶ್ರೀಯ ಗುರು ರಾಮಕೃಷ್ಣ ಕೊಡಂಚ ಕರಣಗಳ ಹೆಸರನ್ನು ಉಲ್ಲೇಖಿಸಿದರು.
ಈ ಸಂದರ್ಭದಲ್ಲಿ ಹಾಜರಿದ್ದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನ ಪ್ರತಿನಿಧಿ ಗೌತಮ್, ತನುಶ್ರೀಗೆ ದಾಖಲೆಯ ತಾತ್ಕಾಲಿಕ ಪ್ರಮಾಣ ಪತ್ರವನ್ನು ವಿತರಿಸಿದರು. ಉಡುಪಿ ಸೈಂಟ್ ಸಿಸಿಲಿಸ್ ಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯಾಗಿರುವ ತನುಶ್ರೀ ಈವರೆಗೆ ಒಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮತ್ತು ಆರು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ದಾಖಲೆಯನ್ನು ನಿರ್ಮಿಸಿದ್ದಾರೆ.
ಇದಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ವಿದ್ವಾಂಸರಾದ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಉಡುಪಿ, ವಿದ್ವಾನ್ ನಾಟ್ಯಾಚಾರ್ಯ ನಾರಾಯಣ ಭಟ್, ವಿದ್ವಾನ್ ಕಮಲಾಕ್ಷ ಆಚಾರ್ಯ, ವಿದುಷಿ ಲಕ್ಷ್ಮೀ ಗುರುರಾಜ್, ವಿದ್ವಾನ್ ಸುಧೀರ್ ರಾವ್, ಬಾಲಚಂದ್ರ ಭಾಗವತ್ ಉಡುಪಿ, ಶ್ರೀಧರ್ ಆಚಾರ್ ಉಡುಪಿ ಸಂಗೀತ ಬಾಲಚಂದ್ರ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯ ಅನುಮತಿ ಪಡೆದ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಸಿ.ರಮೇಶ್, ಶತಮಾನೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಸಯ್ಯದ್ ಅಫ್ಝಲ್ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯ ಕರ ಶೆಟ್ಟಿ ಇಂದ್ರಾಳಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ತನುಶ್ರೀಯ ತಂದೆ ಉದಯ ಕುಮಾರ್, ತಾಯಿ ಸಂಧ್ಯಾ ಹಾಜರಿದ್ದರು. ಪತ್ರಕರ್ತ ನಾಗರಾಜ್ ರಾವ್ ಕಾರ್ಯಕ್ರಮ ನಿರೂಪಿಸಿದರು.
