ಮಂಗಳೂರು: ರೈಲು ಅವಘಡ ತಪ್ಪಿಸಿದ ವೃದ್ಧೆಗೆ ಪೊಲೀಸರಿಂದ ಸನ್ಮಾನ

ಮಂಗಳೂರು, ಎ.4: ರೈಲು ಹಳಿಗೆ ಮರ ಬಿದ್ದುದ್ದನ್ನು ಗಮನಿಸಿ ತಕ್ಷಣ ಎಚ್ಚೆತ್ತುಕೊಂಡು ಸಮಯ ಪ್ರಜ್ಞೆಯಿಂದ ಕೆಂಪುಬಟ್ಟೆಯನ್ನು ಕೈಯಲ್ಲಿ ಪ್ರದರ್ಶಿಸಿ ರೈಲು ನಿಲ್ಲಿಸುವ ಮೂಲಕ ಸಂಭಾವ್ಯ ರೈಲು ಅವಘಡವನ್ನು ತಪ್ಪಿಸಿದ ಕುಡುಪು ಸಮೀಪದ ಆಯರಮನೆಯ ಚಂದ್ರಾವತಿ ಅವರನ್ನು ಮಂಗಳೂರು ರೈಲ್ವೆ ಪೊಲೀಸ್ ಅಧಿಕಾರಿಗಳು ಮಂಗಳವಾರ ಸೆಂಟ್ರಲ್ ನಿಲ್ದಾಣದ ರೈಲ್ವೆ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ರೈಲ್ವೆ ಪೊಲೀಸರು ಮಂಗಳವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಠಾಣೆಗೆ ಕರೆಯಿಸಿ ಸನ್ಮಾನಿಸಿ ಬೀಳ್ಕೊಟ್ಟಿದ್ದಾರೆ.
ಈ ಸಂದರ್ಭ ಮಾತನಾಡಿದ ಮಂಗಳೂರು ರೈಲ್ವೆ ಪೊಲೀಸ್ ಇನ್‌ಸ್ಪೆಕ್ಟರ್ ಮೋಹನ್ ಕೊಟ್ಟಾರಿ ‘70ರ ವಯಸ್ಸಿನ ಚಂದ್ರಾವತಿ ಜೀವದ ಹಂಗು ತೊರೆದು ಸಂಭಾವ್ಯ ರೈಲು ದುರ್ಘಟನೆಯನ್ನು ತಪ್ಪಿಸುವ ಮೂಲಕ ಮಾದರಿ ಕಾರ್ಯ ನಡೆಸಿದ್ದಾರೆ. ಚಂದ್ರಾವತಿ ಅವರ ಸಾಧನೆಯನ್ನು ಇಲಾಖೆಯ ಕೇಂದ್ರ ಕಚೇರಿಗೂ ಮಾಹಿತಿ ನೀಡಲಾಗಿದೆ ಎಂದರು.
ರೈಲ್ವೆ ಇಲಾಖೆಯ ಆರ್‌ಪಿಎಫ್ ಎಸ್.ದಿಲೀಪ್ ಕುಮಾರ್, ಚಂದ್ರಾವತಿಯ ಪುತ್ರ ನವೀನ್ ಕುಮಾರ್ ಕುಡುಪು, ಸಂಬಂಧಿಕರಾದ ಉದಯ್ ಕುಡುಪು ಮುಂತಾದವರು ಉಪಸ್ಥಿತರಿದ್ದರು.
ಮಾ.21ರಂದು ಮಧ್ಯಾಹ್ನ ಸುಮಾರು 2:10ಕ್ಕೆ ಪಡೀಲ್-ಜೋಕಟ್ಟೆ ಮಾರ್ಗವಾಗಿ ಮುಂಬೈಗೆ ಚಲಿಸುತ್ತಿದ್ದ ಮತ್ಸ್ಯಗಂಧ ರೈಲು ಸಂಚರಿಸುತ್ತಿದ್ದಾಗ ಪಚ್ಚನಾಡಿ ಸಮೀಪದ ಮಂದಾರದ ಹಳಿಗೆ ಮರ ಬಿದ್ದಿತ್ತು. ಇದನ್ನು ಗಮನಿಸಿದ ಚಂದ್ರಾವತಿ ತಕ್ಷಣ ಮನೆಯಿಂದ ಕೆಂಪುವಸ್ತ್ರವನ್ನು ತಂದು ಪ್ರದರ್ಶಿಸಿದರು. ಅಪಾಯದ ಮುನ್ಸೂಚನೆ ಅರಿತ ಲೋಕೋಪೈಲಟ್ ರೈಲು ನಿಲ್ಲಿಸಿದ್ದರು. ಇದರಿಂದ ರೈಲು ಅವಘಡ ತಪ್ಪಿತ್ತು. ಅಲ್ಲದೆ ಚಂದ್ರಾವತಿಯ ಸಮಯ ಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.