ಗುಜರಾತ್: ಮಲಗುಂಡಿಗೆ ಇಳಿದ ಮೂವರು ಸ್ವಚ್ಛತಾ ಕಾರ್ಮಿಕರು ಉಸಿರುಕಟ್ಟಿ ಸಾವು

ಅಹ್ಮದಾಬಾದ್, ಎ. 4: ಗುಜರಾತ್‌ನ ಭರೂಚ್ ಜಿಲ್ಲೆಯ ದಹೇಜ್‌ನಲ್ಲಿ ವಸತಿ ಕಟ್ಟಡವೊಂದರ ಸಮೀಪ ಮಂಗಳವಾರ ಮಲಗುಂಡಿ ಸ್ವಚ್ಚಗೊಳಿಸುವ ಸಂದರ್ಭ ಮೂವರು ಸ್ವಚ್ಛತಾ ಕಾರ್ಮಿಕರು ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ 15 ದಿನಗಳಲ್ಲಿ ಈ ರೀತಿ ಸ್ವಚ್ಛತಾ ಕಾರ್ಮಿಕರು ಸಾವನ್ನಪುತ್ತಿರುವ ಮೂರನೇ ಘಟನೆ ಇದಾಗಿದೆ.
ಸ್ವಚ್ಛತಾ ಕಾರ್ಮಿಕರಾದ ಗುಲ್‌ಸಿನ್ಹಾ ವೀರ್‌ಸಿನ್ಹಾ ಮುನಿಯಾ (30), ಪರೇಶ್ ಕಟಾರಾ (31) ಹಾಗೂ ಅನಿಫ್ ಜುಲಾಭಾ ಪರ್ಮಾರ್ (24) ದಹೇಜ್‌ಗೆ ಮಲಗುಂಡಿ ಸ್ವಚ್ಛಗೊಳಿಸಲು ಆಗಮಿಸಿದ್ದರು. ಮಲಗುಂಡಿ ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಅವರಿಗೆ ವಿಷಾನಿಲದಿಂದ ಉಸಿರು ಕಟ್ಟಿತು. ಅವರು ನೆರವಿಗಾಗಿ ಕೂಗಿದರು. ಮಲಗುಂಡಿಯ ಮೇಲೆ ನಿಂತಿದ್ದ ಸ್ವಚ್ಛತಾ ಕಾರ್ಮಿಕರಾದ ಭವೇಶ್ ಕಟಾರಾ ಹಾಗೂ ಜಿಗ್ನೇಶ್ ಪರ್ಮಾರ್ ಅವರ ಕೂಗನ್ನು ಕೇಳಿ ನೆರವಿಗೆ ಧಾವಿಸಿದರು. ಆದರೆ ಉಸಿರು ಕಟ್ಟುವ ಕಾರಣ ಗುಲ್‌ಸಿನ್ಹಾ ವೀರ್ ಸಿನ್ಹ ಮುನಿಯಾ, ಪರೇಶ್ ಕಟಾರಾ ಹಾಗೂ ಅನಿಫ್ ಜುಲಾಭಾ ಪರ್ಮಾರ್‌ಗೆ ಮಲಗುಂಡಿಯಿಂದ ಮೇಲೆ ಬರಲು ಸಾಧ್ಯವಾಗಲಿಲ್ಲ.
ಭವೇಶ್ ಕಟಾರಾ ಹಾಗೂ ಜಿಗ್ನೇಶ್ ಪರ್ಮಾರ್ ಕೂಡಲೇ ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸೇವೆಯ ಸಿಬ್ಬಂದಿಗೆ ಸಂದೇಶ ರವಾನಿಸಿದರು. ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಮೂವರು ಸ್ವಚ್ಛತಾ ಕಾರ್ಮಿಕರನ್ನು ಮೇಲೆತ್ತಿದರು ಹಾಗೂ ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರು.ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಸ್ವಚ್ಛತಾ ಕಾರ್ಮಿಕರು ಯಾವುದೇ ರೀತಿಯ ಸುರಕ್ಷ ಸಾಧನಗಳನ್ನು ಧರಿಸಿದೆ ಪರಸ್ಪರ ಕೈ ಹಿಡಿದುಕೊಂಡು ಮಲಗುಂಡಿಗೆ ಇಳಿದರು. ವಿಷಾನಿಲ ಹಾಗೂ ರಾಸಾಯನಿಕದಿಂದಾಗಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.