ಶಾಕಿಬ್ ಬದಲಿಗೆ ಇಂಗ್ಲೆಂಡ್ ನ ಜೇಸನ್ ರಾಯ್ ಜೊತೆ ಸಹಿ ಹಾಕಿದ ಕೆಕೆಆರ್

ಕೋಲ್ಕತಾ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರ ಸೀಸನ್‌ನಿಂದ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್ ಹಿಂದೆ ಸರಿಯಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಇಂಗ್ಲೆಂಡ್ ಆರಂಭಿಕ ಆಟಗಾರ ಜೇಸನ್ ರಾಯ್ ( Jason Roy )ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದಾಗಿ ಘೋಷಿಸಿದೆ.
ಐಪಿಎಲ್ ಪ್ರಕಟನೆಯ ಪ್ರಕಾರ, ಮೂಲ ಬೆಲೆ 1.5 ಕೋ.ರೂ. ಹೊಂದಿರುವ ರಾಯ್ ಅವರೊಂದಿಗೆ 2.8 ಕೋಟಿ ರೂ.ಗೆ ಸಹಿ ಹಾಕಲಾಗಿದೆ. ನಾಯಕ ಶ್ರೇಯಸ್ ಅಯ್ಯರ್ ಗಾಯದಿಂದ ಹೊರಗುಳಿದ ನಂತರ ಶಾಕಿಬ್ ಇಡೀ ಟೂರ್ನಿಯಿಂದ ಹೊರಗುಳಿದ ಎರಡನೇ ಪ್ರಮುಖ ಆಟಗಾರನಾಗಿದ್ದಾರೆ.
ಕಳೆದ ಕೆಲವು ದಿನಗಳಲ್ಲಿ ಶಾಕಿಬ್ ಹಾಗೂ ಅಯ್ಯರ್ ಇಬ್ಬರು ಪ್ರಮುಖ ಆಟಗಾರರು ಹೊರಗುಳಿದಿದ್ದರೂ ಕೂಡ ಎರಡು ಬಾರಿಯ ಐಪಿಎಲ್ ಚಾಂಪಿಯನ್ ಆಗಿರುವ ನೈಟ್ ರೈಡರ್ಸ್, ರಾಯ್ ಅವರೊಂದಿಗೆ ಮಾತ್ರ ಒಪ್ಪಂದ ಮಾಡಿಕೊಂಡಿದೆ.
ನಾಯಕ ಅಯ್ಯರ್ ಬದಲಿ ಆಟಗಾರನಿಗೆ ಫ್ರಾಂಚೈಸ್ ಸಹಿ ಹಾಕಲು ಬಯಸುತ್ತಿದೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.
ಈ ಹಿಂದೆ 2017 ಹಾಗೂ 2018ರ ಸೀಸನ್‌ಗಳಲ್ಲಿ ಐಪಿಎಲ್ ನಲ್ಲಿ ಕಾಣಿಸಿಕೊಂಡಿದ್ದ ರಾಯ್, 2021ರ ಋತುವಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಕೊನೆಯ ಬಾರಿ ಆಡಿದ್ದರು. 2021 ರಲ್ಲಿ, ಅವರು ಐದು ಪಂದ್ಯಗಳನ್ನು ಆಡಿದ್ದರು, ಅರ್ಧ ಶತಕ ಸೇರಿದಂತೆ 150 ರನ್ ಗಳಿಸಿದ್ದರು. 32ರ ಹರೆಯದ ಅವರು ಇಂಗ್ಲೆಂಡ್ ಪರ 64 ಟಿ20 ಪಂದ್ಯಗಳನ್ನು ಆಡಿದ್ದಾರೆ, 8 ಅರ್ಧಶತಕಗಳೊಂದಿಗೆ 137.61 ಸ್ಟ್ರೈಕ್ ರೇಟ್‌ನಲ್ಲಿ 1,522 ರನ್ ಗಳಿಸಿದ್ದಾರೆ.
ಬಾಂಗ್ಲಾದೇಶದ ಪ್ರಮುಖ ಆಲ್‌ರೌಂಡರ್ ಶಾಕಿಬ್ ಅವರು ಕೌಟುಂಬಿಕ ಕಾರಣಗಳು ಹಾಗೂ ಅಂತರರಾಷ್ಟ್ರೀಯ ಬದ್ಧತೆಗಳ ಕಾರಣದಿಂದ ಐಪಿಎಲ್ ನಿಂದ ಹಿಂದೆ ಸರಿದಿದ್ದಾರೆ. ಬ್ಯಾಟಿಂಗ್ ಶಕ್ತಿ ಅಯ್ಯರ್ ಅವರು ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದರಿಂದ ಸಂಪೂರ್ಣ ಐಪಿಎಲ್‌ನಿಂದ ಹೊರಗುಳಿದಿದ್ದಾರೆ.