ಡಾ.ಪ್ರಸಾದ್ ಭಂಡಾರಿ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಆಗ್ರಹ: ಪುತ್ತೂರಿನ ಕ್ರೈಸ್ತ ಮುಖಂಡರಿಂದ ದೂರು

ಪುತ್ತೂರು: ಇತ್ತೀಚೆಗೆ ಪುತ್ತೂರಿನ ಬೊಳುವಾರಿನಲ್ಲಿ ನಡೆದ ಹಿಂದು ಜಾಗರಣ ವೇದಿಕೆಯ ಕಾರ್ಯಕ್ರಮದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಕ್ರೈಸ್ತರು ನಡೆಸುವ ಸಂಸ್ಥೆಗಳ ಹೆಸರನ್ನು ಹೇಳಿ ದ್ವೇಷಪೂರಿತ ಭಾಷಣ ಮಾಡಿರುವುದು ಸಮುದಾಯಕ್ಕೆ ನೋವಾಗಿದೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪುತ್ತೂರಿನ ಶಿಕ್ಷಣ ಸಂಸ್ಥೆಗಳ ಮತ್ತು ಸಮುದಾಯದ ಮುಖಂಡರು ಬುಧವಾರ ಪುತ್ತೂರು ನಗರ ಠಾಣೆಗೆ ದೂರು ನೀಡಿದರು.
ಕ್ರೈಸ್ತರು ನಡೆಸುವ ಶಿಕ್ಷಣ ಸಂಸ್ಥೆಗಳಾದ ಮಾಯಿದೆ ದೇವುಸ್ ಶಿಕ್ಷಣ ಸಂಸ್ಥೆ, ಸಂತ ಫಿಲೋಮಿನಾ ಕಾಲೇಜು, ಸಂತ ವಿಕ್ಟರ್‍ನ ಪ್ರೌಢಶಾಲೆ, ಬೆಥನಿ ಶಿಕ್ಷಣ ಸಂಸ್ಥೆಗಳು, ಫಾದರ್ ಪತ್ರಾವೋ ಆಸ್ಪತ್ರೆಯ ಪರವಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಮಾ.25ರಂದು ವಾಟ್ಸಾಪ್‍ನಲ್ಲಿ ಪ್ರಚಾರವಾಗುತ್ತಿರುವ ಹಿಂದು ಜಾಗರಣ ವೇದಿಕೆಯ ಕಾರ್ಯಕ್ರಮದ ಭಾಷಣದಲ್ಲಿ ಡಾ.ಎಂ.ಕೆ.ಪ್ರಸಾದ್ ಅವರು ಕ್ರೈಸ್ತ ಸಮುದಾಯದ ವಿರುದ್ಧ ನೇರವಾಗಿ ಸಮಾಜದಲ್ಲಿ ಅಶಾಂತಿಯನ್ನು ತರುವಂತೆ ಮಾತುಗಳನ್ನಾಡಿದ್ದಾರೆ. ಮಾತ್ರವಲ್ಲದೆ ಕೋಮು ಗಲಭೆಯನ್ನು ಸೃಷ್ಟಿಸಲು ಪ್ರಚೋದನೆ ನೀಡಿದ್ದಾರೆ. ಕ್ರೈಸ್ತರು ನಡೆಸುವ ಸಂಸ್ಥೆಗಳಾದ ಸಂತ ಫಿಲೋಮಿನಾ ಕಾಲೇಜು, ಫಾದರ್ ಪತ್ರವೋ ಆಸ್ಪತ್ರೆ, ಬೆಥನಿ ಶಿಕ್ಷಣ ಸಂಸ್ಥೆ, ಸಂತ ವಿಕ್ಟರನ ಸಂಸ್ಥೆ ಅದೇ ರೀತಿ ಮಂಜಲ್ಪಡ್ಪುವಿನಲ್ಲಿರುವ ಸುಧಾನ ಸಂಸ್ಥೆಯ ಹೆಸರನ್ನು ಹೇಳಿ ಈ ಜಾಗವೆಲ್ಲಾ ಹಿಂದುಗಳದ್ದು, ಬ್ರಿಟೀಷರು ಅವರಿಗೆ ನೀಡಿದ್ದು, ಅವರಿಗೆ ಜಾಗ ನೀಡಿ ಹಿಂದುಗಳಿಗೆ ಜಾಗವಿಲ್ಲದಂತಾಗಿದೆ ಎಂದು ಹೇಳಿದ್ದಾರೆ. ಅವರು ಕ್ರೈಸ್ತ ಸಮುದಾಕ್ಕೆ ಅಪಮಾನ ಮಾಡಿರುವುದು ನೋವು ತಂದಿದೆ. ದ್ವೇಷ ಭಾಷಣಗಳಂತಹ ಚಟುವಟಿಕೆಗಳು ಅಘಾತಕಾರಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಲ್ಲಿ ಭಾರತೀಯ ದಂಡ ಸಂಹಿತೆ 1890ರ ಅಡಿಯಲ್ಲಿ ಡಾ. ಎಂ.ಕೆ.ಪ್ರಸಾದ್ ಅವರು ವಿವಿಧ ಅಪರಾಧಗಳನ್ನು ಮಾಡಿದ್ದಾರೆ. ಇಂತಹ ದ್ವೇಷ ಪೂರಿತ ಭಾಷಣಗಳಿಗೆ ಕಡಿವಾಣ ಹಾಕಿ, ಡಾ.ಎಂ.ಕೆ.ಪ್ರಸಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹಾಗೂ ಡಾ. ಪ್ರಸಾದ್ ಭಂಡಾರಿ ಭಾಷಣ ಮಾಡಿದ ವೀಡಿಯೋವನ್ನು ಯುಟ್ಯೂಬ್ ಚಾನೆಲ್ ಮತ್ತಿತರ ಸಾಮಾಜಿಕ ಜಾಲತಾಣಗಳಿಂದ ತಕ್ಷಣ ಅಳಿಸಬೇಕು ಮತ್ತು ಅವರು ಈ ಬಗ್ಗೆ ಕ್ಷಮೆಯಾಚಿಸಬೇಕೆಂದು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಮಾಯ್ದೆ ದೇವುಸ್ ಚರ್ಚ್‍ನ ಧರ್ಮಗುರು ಹಾಗೂ ಮಾಯ್ದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ವಂ|ಫಾ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ಕೆವಿನ್ ಡಿಸೋಜ, ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ| ಡಾ| ಆಂಟನಿ ಪ್ರಕಾಶ್ ಮೊಂತೇರೋ, ಸಂತ ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ| ಸ್ಟ್ಯಾನಿ ಪಿಂಟೋ, ಸಂತ ಪಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ| ಅಶೋಕ್ ರಾಯನ್ ಕ್ರಾಸ್ತಾ, ಚರ್ಚ್‍ನ ಪಾಲನ ಸಮಿತಿ ಉಪಾಧ್ಯಕ್ಷ ಜೆರಾಲ್ಡ್ ಡಿಕೋಸ್ಟ, ಫಾ. ಪತ್ರಾವೋ ಆಸ್ಪತ್ರೆಯ ವ್ಯದ್ಯೆ ಡಾ. ಫ್ಲೋರಿನಾ, ಬೆಥನಿ ಶಾಲಾ ಸಂಚಾಲಕಿ ಸಿ. ಪ್ರಶಾಂತಿ, ಸಂತ ವಿಕ್ಟರ್ ಪ್ರೌಢಶಾಲೆಯ ಮುಖ್ಯಗುರು ರೋಸ್ಲಿನ್ ಲೋಬೋ, ಪ್ರಾಥಮಿಕ ಶಾಲೆಯ ಮುಖ್ಯಗುರು ಹೆರಿ ಡಿಸೋಜ, ಸಮುದಾಯದ ಮುಖಂಡರಾದ ಜಾನ್ ಕುಟಿನ್ಹೋ, ಜೋ ಡಿಸೋಜಾ, ಜೆ.ಪಿ. ರಾಡ್ರಿಗಸ್ ಮತ್ತಿರರು ಉಪಸ್ಥಿತರಿದ್ದರು.