ಉಡುಪಿ : ಅಳುಪ ದೊರೆ ವೀರ ಪಾಂಡ್ಯನ 13ನೇ ಶತಮಾನದ ಶಾಸನ ಪತ್ತೆ

ಉಡುಪಿ, ಎ.5: ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ ಸಕ್ಕಟ್ಟು ಎಂಬ ಪ್ರದೇಶದಲ್ಲಿ ಆಳುಪ ದೊರೆ ವೀರ ಪಾಂಡ್ಯನ 13ನೇ ಶತಮಾನದ ಶಿಲಾ ಶಾಸನವೊಂದು ಪತ್ತೆಯಾಗಿದೆ.
ಗ್ರಾನೈಟ್ ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಈ ಶಾಸನವು ಕೊಳ್ಕೆಬೈಲು ಗದ್ದೆಯಲ್ಲಿ ಪತ್ತೆಯಾಗಿದ್ದು, ಕನ್ನಡ ಲಿಪಿ ಮತ್ತು ಭಾಷೆಯಲ್ಲಿದೆ. ಶಾಸನದ ಹೆಚ್ಚಿನ ಸಾಲುಗಳು ತೃಟಿತಗೊಂಡಿದ್ದು, ಕೇವಲ 12 ಸಾಲುಗಳಲ್ಲಿ ಭಾಗಶಃ ಕಂಡುಬರುತ್ತದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗವಿದ್ದು, ಇಕ್ಕೆಲಗಳಲ್ಲಿ ಸೂರ್ಯ-ಚಂದ್ರ, ರಾಜಕತ್ತಿ, ನಂದಾದೀಪ ಮತ್ತು ನಂದಿಯ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ.
ಸ್ವಸ್ತಿಶ್ರೀ ಎಂಬ ಶುಭಸೂಚಕದಿಂದ ಪ್ರಾರಂಭವಾಗುವ ಈ ಶಾಸನವು ಶಕವರುಷ 1266ನೆಯ ತಾರಣ ಸಂವತ್ಸ ರದ ಶ್ರಾವಣ ಬಹುಳ 13 ಸಿಂಹಮಾಸ ವಡ್ಡವಾರ (ಗುರುವಾರ) ಎಂಬ ಕಾಲಮಾನವನ್ನು ಉಲ್ಲೇಖಿಸಿದ್ದು, ಇದು ಸಾಮಾನ್ಯ ವರ್ಷ 1344ಕ್ಕೆ ಸರಿ ಹೊಂದುತ್ತದೆ.
ಶಾಸನದಲ್ಲಿ ಆಳುಪ ದೊರೆ ವೀರಪಾಂಡ್ಯ ದೇವನನ್ನು ‘ಶ್ರೀಪಾಂಡ್ಯ ಚಕ್ರವರ್ತಿ, ಯರಿರಾಯ ಬಸವಸಂಕರ, ರಾಯಗಜಾಂಕುಸ’ ಎಂಬ ಬಿರುದಿನಿಂದ ಉಲ್ಲೇಖಿಸಿರುವುದನ್ನು ಕಾಣಬಹುದಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಪ್ರಸ್ತುತ ಈ ಶಾಸನವನ್ನು ಜೀರ್ಣೋದ್ಧಾರದಲ್ಲಿರುವ ಸಕ್ಕಟ್ಟು ಶ್ರೀ ವಿಷ್ಣುಮೂರ್ತಿ ದೇವಾಲಯಕ್ಕೆ ಸಂರಕ್ಷಣಾ ದೃಷ್ಟಿಯಿಂದ ಸ್ಥಳಾಂತರ ಮಾಡಲಾಗಿದೆ.
ಪಾದೂರು ಗುರುರಾಜ್ ಭಟ್ ಅವರು ತಮ್ಮ ಮಹಾಪ್ರಬಂಧವಾದ ’ಸ್ಟಡೀಸ್ ಇನ್ ತುಳುವ ಹಿಸ್ಟರಿ ಅಂಡ್ ಕಲ್ಚರ್’ನಲ್ಲಿ ದೇವಾಲಯದಲ್ಲಿನ ಶ್ರೀಧರ ವಿಗ್ರಹದ (12-13ನೇ ಶತಮಾನ) ಬಗ್ಗೆ ಉಲ್ಲೇಖ ನೀಡಿದ್ದು, ಈ ಮೂರ್ತಿಯ ಪ್ರಭಾವಳಿಯಲ್ಲಿ ವಿಷ್ಣುವಿನ ದಶಾವತಾರದ ಕೆತ್ತನೆಯನ್ನು ಕಾಣಬಹುದು. ಮಾತ್ರವಲ್ಲದೇ ದೇವಾಲಯದ ಹೊರ ಭಿತ್ತಿಯಲ್ಲಿ 15-16ನೇ ಶತಮಾನಕ್ಕೆ ಸೇರಿರುವ ವರ್ಣಚಿತ್ರಗಳ ಅವಶೇಷಗಳನ್ನು ಸಹ ನೋಡಬಹುದು.ದೇವಾಲಯದ ಹೊರಭಾಗದಲ್ಲಿ ಇನ್ನೊಂದು ಶಾಸನವಿದ್ದು, ಇದು ಸಂಪೂರ್ಣವಾಗಿ ತೃಟಿತಗೊಂಡಿರುತ್ತದೆ.
ಹವ್ಯಾಸಿ ಇತಿಹಾಸ ಸಂಶೋಧಕ ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ ಅವರ ಮಾಹಿತಿಯ ಮೇರೆಗೆ ಹೈದರಾಬಾದ್‌ನ ಪ್ಲೀಚ್ ಇಂಡಿಯಾ ಫೌಂಡೇಶನ್‌ನಲ್ಲಿ ಸಂಶೋಧಕರಾಗಿರುವ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಈ ಶಾಸನವನ್ನು ಅಧ್ಯಯನ ಮಾಡಿದ್ದಾರೆ.
ಕ್ಷೇತ್ರಕಾರ್ಯ ಶೋಧನೆಗೆ ಪ್ರಾಚ್ಯಸಂಚಯ ಸಂಶೋಧನಾ ಕೇಂದ್ರ ಉಡುಪಿ ಇದರ ಅಧ್ಯಯನ ನಿರ್ದೇಶಕ ಎಸ್.ಎ. ಕೃಷ್ಣಯ್ಯ ಮತ್ತು ಸಕ್ಕಟ್ಟು ಶ್ರೀವಿಷ್ಣುಮೂರ್ತಿ ದೇವಾಲಯದ ಆಡಳಿತ ಮುಖ್ಯಸ್ಥ ಎಸ್. ರಘುರಾಮ ರಾವ್ ಅವರ ಮಗ ಎಸ್. ಗೋಪಾಲಕೃಷ್ಣ ರಾವ್ ಸಹಕಾರ ನೀಡಿದ್ದಾರೆ ಎಂದು ಶ್ರುತೇಶ್ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

