ಹೊಸದಿಲ್ಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರು, ರೈತರಿಂದ ರ‍್ಯಾಲಿ

ಹೊಸದಿಲ್ಲಿ, ಎ. 5: ತಮ್ಮ ಮೂಲಭೂತ ಅಗತ್ಯತೆಗಳನ್ನು ಕಡೆಗಣಿಸಲಾಗುತ್ತಿದೆ. ಜೀವನೋಪಾಯವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಆರೋಪಿಸಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ಹಲವು ಎಡಪಂಥೀಯ ಕಾರ್ಮಿಕ ಒಕ್ಕೂಟಗಳು ಬುಧವಾರ ಇಲ್ಲಿನ ರಾಮಲೀಲಾ ಮೈದಾನದಲ್ಲಿ ನಡೆಸಿದ ರ‍್ಯಾಲಿಯಲ್ಲಿ ಕಾರ್ಮಿಕರು, ರೈತರು ಸೇರಿದಂತೆ ಸಾವಿರಾರು ಜನರು ಪಾಲ್ಗೊಂಡರು.
ಸಿಐಟಿಯು, ಎಐಕೆಎಸ್ ಆಗೂ ಎಐಎಡಬ್ಲ್ಯುಯು ಕಾರ್ಮಿಕ-ರೈತ ರ‍್ಯಾಲಿಯನ್ನು ಆಯೋಜಿಸಿತ್ತು. ರ‍್ಯಾಲಿಯಲ್ಲಿ ಮಾತನಾಡಿದ ನಾಯಕರು, ರ‍್ಯಾಲಿಯು ದೇಶದಲ್ಲಿ ಕಾರ್ಮಿಕರ ಆಕ್ರೋಶ ಹೆಚ್ಚಾಗುತ್ತಿರುವುದರ ಸೂಚನೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ ಎಂದು ಒಕ್ಕೂಟದ ಅಧಿಕೃತ ಹೇಳಿಕೆ ತಿಳಿಸಿದೆ.
ಹರ್ಯಾಣ, ಪಂಜಾಬ್, ರಾಜಸ್ಥಾನ, ಉತ್ತರಪ್ರದೇಶ, ಹಿಮಾಚಲಪ್ರದೇಶ, ಜಮ್ಮು ಹಾಗೂ ಕಾಶ್ಮೀರ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ಕರ್ನಾಟಕ, ಅಸ್ಸಾಂ, ತ್ರಿಪುರಾ, ಮಣಿಪುರ, ಗುಜರಾತ್ ರಾಜ್ಯಗಳು ಸೇರಿದಂತೆ ದೇಶದ ವಿವಿಧ ಭಾಗದ ಸಾವಿರಾರು ಕಾರ್ಮಿಕರು, ರೈತರು ಹಾಗೂ ಕೃಷಿ ಕಾರ್ಮಿಕರು ರ‍್ಯಾಲಿಯಲ್ಲಿ ಭಾಗವಹಿಸಿದರು ಎಂದು ಹೇಳಿಕೆ ತಿಳಿಸಿದೆ.
ಕಾರ್ಮಿಕರು, ತಮಗೆ ಹಾಗೂ ತಮ್ಮ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಸೇವೆ ಹಾಗೂ ಗೌರವಯುತವಾದ ಬದುಕಿಗೆ ಅವಕಾಶ ಮಾಡಿಕೊಡುವ ಸರಕಾರದ ನೀತಿಗಳಿಗಾಗಿ ಸರಕಾರವನ್ನು ಆಗ್ರಹಿಸಿದರು. ರ‍್ಯಾಲಿಯಲ್ಲಿ ಸಿಐಟಿಯು, ಎಐಕೆಎಸ್ ಹಾಗೂ ಎಐಎಡಬ್ಲ್ಯುಯು ನಾಯಕರು ಹಾಗೂ ಇತರರ ನಾಯಕರು ಮಾತನಾಡಿದರು.







