ಸೋಮಾಲಿಯಾದಲ್ಲಿ ಭೀಕರ ಪ್ರವಾಹ; ಕನಿಷ್ಠ 21 ಮಂದಿ ನೀರುಪಾಲು

ಮೊಗದಿಶು: ಸೋಮಾಲಿಯಾದಲ್ಲಿ ಕಳೆದ ವಾರ ಸಂಭವಿಸಿದ ಭೀಕರ ಪ್ರವಾಹದಲ್ಲಿ ಆರು ಮಂದಿ ಮಕ್ಕಳು ಸೇರಿದಂತೆ ಕನಿಷ್ಠ 21 ಮಂದಿ ನೀರುಪಾಲಾಗಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಕಟಿಸಿದೆ.
ಮೊದಲು ಕ್ಷಾಮಪೀಡಿತವಾಗಿದ್ದ ದಕ್ಷಿಣ ಸೋಮಾಲಿಯಾದ ಜೆಡೊ ಪ್ರದೇಶದ ಬರ್ಧಾರ್ ಜಿಲೆಯಲ್ಲಿ ಭಾರಿ ಮಳೆ ಮತ್ತು ದಿಢೀರ್ ಪ್ರವಾಹದಿಂದ ಕನಿಷ್ಠ ಒಂದು ಲಕ್ಷ ಮಂದಿಗೆ ತೊಂದರೆಯಾಗಿದೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ ಹೇಳಿಕೆ ನೀಡಿದೆ.
ಇಥಿಯೋಪಿಯಾಗೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ಶಬೆಲ್ಲೆ ಮತ್ತು ಜ್ಯೂಬಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಿದೆ. ಭೀಕರ ಪ್ರವಾಹದಿಂದ ಆರೋಗ್ಯ ವ್ಯವಸ್ಥೆಗಳು ಸಂಪೂರ್ಣ ಹಾನಿಗೀಡಾಗಿವೆ ಎಂದು ಸೋಮಾಲಿಯಾದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಏಜೆನ್ಸಿ ಬುಧವಾರ ಪ್ರಕಟಿಸಿದೆ.
ನದಿಯ ಅಕ್ಕಪಕ್ಕದಲ್ಲಿ ವಾಸಿಸುವ ಸಮುದಾಯಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಏಜೆನ್ಸಿಯ ಕಾರ್ಯತಂತ್ರ ನೀತಿ ಮತ್ತು ಪಾಲುದಾರಿಕೆ ವಿಭಾಗದ ಸಲಹೆಗಾರ ಮೊಹ್ಮದ್ ಮೊಲಿಮ್ ಹೇಳಿದ್ದಾರೆ. ಬರ್ಧಾರ್ ಜಿಲ್ಲೆಯ 250ಕ್ಕೂ ಹೆಚ್ಚು ಬಾಧಿತ ಕುಟುಂಬಗಳಿಗೆ ಆಹಾರ ವಸ್ತುಗಳನ್ನು ವಿತರಿಸಲಾಗಿದೆ.
ಪ್ರವಾಹದಿಂದ ನಾಲ್ಕು ಶಾಲೆಗಳು ಹಾಗೂ 200ಕ್ಕೂ ಹೆಚ್ಚು ಶೌಚಾಲಯಗಳು ಹಾನಿಗೀಡಾಗಿವೆ. ಇದರಿಂದ 3000ಕ್ಕೂ ಹೆಚ್ಚು ಮಕ್ಕಳಿಗೆ ತೊಂದರೆಯಾಗಿದೆ. 1000 ಹೆಕ್ಟೇರ್ ಕೃಷಿಭೂಮಿ ನಾಶವಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.