ರಾಹುಲ್ ಗಾಂಧಿ ಆಧುನಿಕ ಭಾರತದ ಮಹಾತ್ಮ ಗಾಂಧಿ: ಕಾಂಗ್ರೆಸ್ ಶಾಸಕನ ಬಣ್ಣನೆ

ರಾಯ್‌ಪುರ (ಛತ್ತೀಸ್‌ಗಢ): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅನರ್ಹತೆಯ ವಿರುದ್ಧ ಪ್ರತಿಭಟನೆಯ ನಡುವೆ, ಕಾಂಗ್ರೆಸ್ ಶಾಸಕ ಅಮಿತೇಶ್ ಶುಕ್ಲಾ ಅವರು ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಆಧುನಿಕ ಭಾರತದ ಮಹಾತ್ಮ ಗಾಂಧಿ ಎಂದು ಬಣ್ಣಿಸಿದ್ದಾರೆ.
2018 ರ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ಶುಕ್ಲಾ ಅವರು ಮಹಾತ್ಮ ಗಾಂಧಿ ಹಾಗೂ ರಾಹುಲ್ ಗಾಂಧಿ ನಡುವೆ ಹಲವಾರು ಸಾಮ್ಯತೆಗಳನ್ನು ಪ್ರತಿಪಾದಿಸಿದರು.
ಎಎನ್‌ಐ ಜೊತೆ ಮಾತನಾಡಿದ ಶುಕ್ಲಾ, "ರಾಹುಲ್ ಗಾಂಧಿ ಅವರು ಆಧುನಿಕ ಭಾರತದ ಮಹಾತ್ಮ ಗಾಂಧಿ. ಅವರು ಮಹಾತ್ಮ ಗಾಂಧಿಯವರೊಂದಿಗೆ ಸಾಕಷ್ಟು ಹೋಲಿಕೆಗಳನ್ನು ಹೊಂದಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೊ ಯಾತ್ರೆಯನ್ನು ಮಾಡಿದರು. ಮಹಾತ್ಮ ಗಾಂಧಿಯವರು ದಂಡಿ ಯಾತ್ರೆ ಮಾಡಿದ್ದರು. 'ದಂಡಿ ಯಾತ್ರೆ' ಸಮಯದಲ್ಲಿ ಮಹಾತ್ಮ ಗಾಂಧಿಯವರು ಹಲವಾರು ಕಿಲೋಮೀಟರ್‌ಗಳಷ್ಟು ಮೆರವಣಿಗೆ ನಡೆಸಿದ್ದರಂತೆ, ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷರೂ ಭಾರತ್ ಜೋಡೊ ಯಾತ್ರೆಯ ಸಮಯದಲ್ಲಿ ದೇಶಾದ್ಯಂತ ನಡೆದರು ಹಾಗೂ ಜನರೊಂದಿಗೆ ಸಂವಾದ ನಡೆಸಿದರು'' ಎಂದು ಹೇಳಿದರು.
"ನಾನು ಈ ಹೇಳಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಹೇಳುತ್ತಿದ್ದೇನೆ. ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ಸೇರಿದವನು. ನನ್ನ ತಂದೆ (ಅವಿಭಜಿತ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶ್ಯಾಮ ಚರಣ್ ಶುಕ್ಲಾ) ಹಾಗೂ ಚಿಕ್ಕಪ್ಪ (ಹಿರಿಯ ಕಾಂಗ್ರೆಸ್ ನಾಯಕ ವಿದ್ಯಾ ಚರಣ್) ಅವರಿಂದ ಮಹಾತ್ಮಾ ಗಾಂಧಿಯವರ ಬಗ್ಗೆ ನಾನು ಕೇಳಿದ್ದೇನೆ. ಮಹಾತ್ಮ ಗಾಂಧಿ ಹಾಗೂ ರಾಹುಲ್ ಗಾಂಧಿ ನಡುವೆ ಹಲವಾರು ಸಾಮ್ಯತೆಗಳಿವೆ ಎಂದು ನಾನು ಭಾವಿಸುತ್ತೇನೆ'' ಎಂದರು.
ತಮ್ಮ ಸತ್ಯದ ಅಸ್ತ್ರದಿಂದ 'ಬ್ರಿಟಿಷ್ ಸಾಮ್ರಾಜ್ಯ'ವನ್ನು ಅಂತ್ಯಗೊಳಿಸಿದ ಮಹಾತ್ಮ ಗಾಂಧಿಯಂತೆ ರಾಹುಲ್ ಗಾಂಧಿ ಕೂಡ ನಿರ್ಭಯವಾಗಿ ಸತ್ಯವನ್ನು ಮಾತನಾಡುತ್ತಾರೆ. ರಾಹುಲ್ ಗಾಂಧಿ ಅವರು ಅಂಕಿ-ಅಂಶಗಳ ಜೊತೆಗೆ ಅದಾನಿ ಷೇರುಗಳ ಸಮಸ್ಯೆಯ ಬಗ್ಗೆ ಸತ್ಯವನ್ನು ಮಾತನಾಡುತ್ತಿದ್ದಾರೆ ಎಂದು ವಿವರಿಸಿದರು.







