ಇದ್ರೀಸ್ ಪಾಷಾ ಕುಟುಂಬಕ್ಕೆ 50 ಲಕ್ಷ ರೂ.ಪರಿಹಾರ ಘೋಷಿಸಬೇಕು: ಶಾಸಕ ಝಮೀರ್ ಅಹ್ಮದ್ ಆಗ್ರಹ

ಬೆಂಗಳೂರು, ಎ.6: ಸಂಘಪರಿವಾರದ ಕಾರ್ಯಕರ್ತರಿಂದ ಹತ್ಯೆಗೀಡಾದ ಜಾನುವಾರುಗಳ ಸಾಗಾಟದ ವಾಹನ ಚಾಲಕ, ಮಂಡ್ಯ ಜಿಲ್ಲೆಯ ಇದ್ರೀಸ್ ಪಾಷಾ ಕುಟುಂಬಕ್ಕೆ ರಾಜ್ಯ ಸರಕಾರ ಕನಿಷ್ಠ 50 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಬೇಕು ಎಂದು ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಆಗ್ರಹಿಸಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾನುವಾರುಗಳನ್ನು ಆರ್‌ಎಂಸಿ ಯಾರ್ಡ್ ಮಾರುಕಟ್ಟೆಯಲ್ಲಿ ಖರೀದಿ ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳು ಇವೆ. ಆತ ಜಾನುವಾರುಗಳನ್ನು ಕಸಾಯಿ ಖಾನೆಗೆ ಸಾಗಿಸುತ್ತಿದ್ದರೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಬಹುದಿತ್ತು ಎಂದರು.
ಆತ ತಪ್ಪು ಮಾಡಿದ್ದರೆ ಅದನ್ನು ಪ್ರಶ್ನಿಸಲು ಪೊಲೀಸರು, ನ್ಯಾಯಾಲಯ, ಸರಕಾರ ಇದೆ. ನೀನು ಯಾವನೋ? ಕಾನೂನು ಕೈಗೆತ್ತಿಕೊಂಡು ಆತನ ಪ್ರಾಣ ತೆಗೆಯಲು. ಇಂತಹ ಕೃತ್ಯ ಎಸಗಿರುವ ಪುನೀತ್ ಕೆರೆಹಳ್ಳಿಗೆ ಗಲ್ಲು ಶಿಕ್ಷೆಯಾಗಬೇಕು. ಅಲ್ಲದೆ, ಇದ್ರೀಸ್ ಪಾಷಾ ಕುಟುಂಬಕ್ಕೆ ದಯವಿಟ್ಟು 50 ಲಕ್ಷ ರೂ.ಗಳ ಪರಿಹಾರ ಘೋಷಿಸಿ ಎಂದು ಅವರು ಮನವಿ ಮಾಡಿದರು.
ಇದ್ರೀಸ್ ಪಾಷಾಗೆ ತಂದೆ, ತಾಯಿ ಇಲ್ಲ. ಆತ, ಪತ್ನಿ ಹಾಗೂ ನಾಲ್ವರು ಮಕ್ಕಳೊಂದಿಗೆ ಮಂಡ್ಯದಲ್ಲಿ ವಾಸವಿದ್ದ. ಆತನ ನಾಲ್ಕನೆ ಮಗು ಕೇವಲ ಮೂರು ತಿಂಗಳ ಹಸುಗುಸು. ನಾನು ಹಾಗೂ ಶಾಸಕ ರಿಝ್ವಾನ್ ಅರ್ಶದ್ ಇತ್ತೀಚೆಗೆ ಅವರ ಮನೆಗೆ ಭೇಟಿ ನೀಡಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದೆವು. ಸಣ್ಣ ಮಗುವನ್ನು ನೋಡಿದಾಗ ಕಣ್ಣೀರು ತಡೆಯಲು ಆಗಲಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಕುಟುಂಬಕ್ಕೆ ಆಧಾರವಾಗಿದ್ದ ಇದ್ರೀಸ್ ಪಾಷಾ ಈಗ ಇಲ್ಲ. ಆತನ ಇಡೀ ಕುಟುಂಬ ಈಗ ಬೀದಿ ಬಂದಂತಾಗಿದೆ. ಸರಕಾರ ಬೇರೆ ಕಡೆಯಲ್ಲ ಪರಿಹಾರ ನೀಡುತ್ತೆ. ಇದ್ರೀಸ್ ಪಾಷಾ ಕುಟುಂಬದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಪರಿಹಾರ ಘೋಷಿಸಬೇಕು ಎಂದು ಅವರು ಆಗ್ರಹಿಸಿದರು.







