ವಿಧಾನ ಸಭೆ ಚುನಾವಣೆ: ಮಂಗಳೂರು ಉತ್ತರಕ್ಕೆ ಹಿಂದೂಸ್ಥಾನ ಪಕ್ಷದಿಂದ ಬಿ ಪ್ರವೀಣ್ ಆಯ್ಕೆ

ಮಂಗಳೂರು: ಮಂಗಳೂರು ಉತ್ತರಕ್ಕೆ ಹಿಂದೂಸ್ಥಾನ ಜನತಾ ಪಾರ್ಟಿಯ ಪ್ರಧಾನ ಕಾರ್ಯದರ್ಶಿ ಬಿ ಪ್ರವೀಣ್ ಅವರನ್ನು ಅಭ್ಯರ್ಥಿಯನ್ನಾಗಿ ಆಯ್ಕೆಮಾಡಲಾಗಿದೆ ಎಂದು ಹಿಂದೂಸ್ಥಾನ ಜನತಾ ಪಾರ್ಟಿಯ ರಾಜ್ಯ ಉಪಾಧ್ಯಕ್ಷ ಡಾ.ಎಲ್.ಕೆ ಸುವರ್ಣ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬಿಜೆಪಿಯು ಸಂಘ ಪರಿವಾರದ ಯುವಕರನ್ನು ಬಳಸಿ ದೂರಸರಿಸುತ್ತಿದೆ. ಬಿಜೆಪಿ ಹಿಂದು ಸಂಘಟನೆಯ ಕಾರ್ಯಕರ್ತರನ್ನು ಕಡೆಗಣಿಸಿದರಿಂದ ಸಂಘಟನೆಯನ್ನು ತ್ಯಜಿಸಿ ಪಾರ್ಟಿಗೆ ಬಂದಿದ್ದೇನೆ. ಪಾರ್ಟಿಯ ಉಪಾಧ್ಯಕ್ಷ ಆಗುವ ಮೊದಲು ಹಿಂದೂ ಪರಿಷತ್ ಸಂಘಟನೆಯ ರಾಜ್ಯಾಧ್ಯಕ್ಷ ಆಗಿದ್ದೆ. ಸರಕಾರದ ಲೋಪದೋಷವನ್ನು ಬದಲಾಯಿಸುವ ನಿಟ್ಟಿನಲ್ಲಿ ರಾಜ್ಯಾದ ಎಲ್ಲಾ ವಿಧಾನ ಸಭಾ ಕ್ಷೇತ್ರದಲ್ಲಿ ಹಿಂದೂಸ್ಥಾನ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕಿಳಿಸುತ್ತಿದ್ದೇವೆ. ದ.ಕ ಜಿಲ್ಲೆಯ ಮಂಗಳೂರು ಉತ್ತರಕ್ಕೆ ಶಾಸಕ ಭರತ್ ಶೆಟ್ಟಿ ವಿರುದ್ಧ ಬಿ.ಪ್ರವೀಣ್ ಅವರನ್ನು ಆಯ್ಕೆ ಮಾಡಲಾಗಿದೆ. ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆಗೊಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಂಗಳೂರು ಉತ್ತರದ ಅಭ್ಯರ್ಥಿ ಬಿ.ಪ್ರವೀಣ್, ಜಿಲ್ಲಾಧ್ಯಕ್ಷ ಲೋಕೇಶ್ ಉಳ್ಳಾಲ, ಮಹಿಳಾ ಘಟಕದ ಸದಸ್ಯರಾದ ಯಮುನಾ ಬೋಳಾರ್ ಹಾಗೂ ಶಕುಂತಳ ಉಪಸ್ಥಿತರಿದ್ದರು.