ʼಅತ್ಯಂತ ತಪ್ಪು ನಿರ್ಧಾರʼ: ಪುತ್ರ ಬಿಜೆಪಿ ಸೇರಿದ ಬಗ್ಗೆ ಎಕೆ ಆಂಟನಿ ವಿಷಾದ
"ಕೊನೆಯ ಉಸಿರು ಇರುವವರೆಗೂ ನಾನು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ತಪ್ಪು ನೀತಿಗಳನ್ನು ವಿರೋಧಿಸುತ್ತೇನೆ"

ತಿರುವನಂತಪುರ: ತಮ್ಮ ಮಗ ಬಿಜೆಪಿ ಸೇರಿರುವುದಕ್ಕೆ ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ. ತನ್ನ ಮಗ ಅತ್ಯಂತ ತಪ್ಪು ನಿರ್ಧಾರ ತೆಗೆದುಕೊಂಡು ಬಿಜೆಪಿ ಸೇರಿದ್ದಾನೆ, ಇದರಿಂದ ನೋವಾಗಿದೆ ಎಂದು ಅವರು ಹೇಳಿದ್ದಾರೆ.
ಅನಿಲ್ ಆಂಟನಿ ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದ ಎಕೆ ಆಂಟನಿ, ನರೇಂದ್ರ ಮೋದಿ ಸರ್ಕಾರ ವ್ಯವಸ್ಥಿತವಾಗಿ ಭಾರತದ ವೈವಿಧ್ಯತೆ ಮತ್ತು ಜಾತ್ಯತೀತತೆಯನ್ನು ದುರ್ಬಲಗೊಳಿಸುತ್ತಿದೆ ಮತ್ತು ದೇಶದ ಸಾಂವಿಧಾನಿಕ ಮೌಲ್ಯವನ್ನು ನಾಶಪಡಿಸುತ್ತಿದೆ ಎಂದು ಹೇಳಿದ್ದಾರೆ.
ಬಿಜೆಪಿ ಸೇರುವ ಅನಿಲ್ ನಿರ್ಧಾರ ನನಗೆ ನೋವುಂಟು ಮಾಡಿದೆ. ಇದು ತೀರಾ ತಪ್ಪು ನಿರ್ಧಾರ ಎಂದು ಆಂಟನಿ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.
ಭಾರತದ ಆಧಾರವೆಂದರೆ ಏಕತೆ ಮತ್ತು ಧಾರ್ಮಿಕ ಸಾಮರಸ್ಯ. 2014ರ ನಂತರ ಅಧಿಕಾರಕ್ಕೆ ಬಂದ ಮೋದಿ ಸರಕಾರವು ವೈವಿಧ್ಯತೆ ಮತ್ತು ಜಾತ್ಯತೀತತೆಯನ್ನು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ. ವಿವಿಧತೆಯಲ್ಲಿ ಏಕತೆ ಎಂಬುದು ಭಾರತೀಯ ಪರಿಕಲ್ಪನೆ, ಅದು ಭಾರತದ ಏಕತೆಗೆ ನಿಜವಾದ ಕಾರಣ. ಆದರೆ ಬಿಜೆಪಿ ಏಕರೂಪತೆಯನ್ನು ಮಾತ್ರ ನಂಬುತ್ತದೆ. ಅವರು ದೇಶದ ಸಾಂವಿಧಾನಿಕ ಮೌಲ್ಯಗಳನ್ನು ನಾಶಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಕೊನೆಯ ಉಸಿರು ಇರುವವರೆಗೂ ನಾನು ಆರ್‌ಎಸ್‌ಎಸ್ ಮತ್ತು ಬಿಜೆಪಿಯ ತಪ್ಪು ನೀತಿಗಳನ್ನು ವಿರೋಧಿಸುತ್ತೇನೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಇತ್ತೀಚೆಗೆ ಕಾಂಗ್ರೆಸ್ ಪಕ್ಷವನ್ನು ತೊರೆದ ಅನಿಲ್ ಆಂಟನಿ, ಗುರುವಾರ ದಿಲ್ಲಿಯಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ ಮತ್ತು ವಿ ಮುರಳೀಧರನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.







