ಗುಂಡ್ಲುಪೇಟೆ | ಲಂಚಕ್ಕೆ ಬೇಡಿಕೆ ಇಟ್ಟ ಆರೋಪ: ಕೃಷಿ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ

ಚಾಮರಾಜನಗರ: ಕಂಪೆನಿಯ ಬಿಲ್ ಮಂಜೂರು ಮಾಡದೇ 70 ರಿಂದ 80 ಫೈಲ್ ಗಳನ್ನು ಬಾಕಿ ಉಳಿಸಿಕೊಂಡು ಲಂಚಕ್ಕೆ ಬೇಡಿಕೆ ಇಟ್ಟ ಕೃಷಿ ಇಲಾಖೆ ಅಧಿಕಾರಿಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದಲ್ಲಿ ನಡೆದಿದೆ.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರವೀಣ್‍ಕುಮಾರ್, ತಾಂತ್ರಿಕ ಮತ್ತು ಕೃಷಿ ಅಧಿಕಾರಿ ಸತೀಶ್ ಹಾಗೂ ಡಿ.ಗ್ರೂಪ್ ನೌಕರ ಅರುಣ್ ಲೋಕಾಯುಕ್ತಕ್ಕೆ ಸಿಕ್ಕಿಬಿದಿದ್ದಾರೆ.
ಗುಂಡ್ಲುಪೇಟೆ ಪಟ್ಟಣದಲ್ಲಿರುವ ಎಸ್.ಆರ್.ಟ್ರೇಡರ್ಸ್ ಎಂಬ ಕಂಪನಿಯ ಬಿಲ್ಗಳನ್ನು ಮಂಜೂರು ಮಾಡದೇ ಬಾಕಿ ಉಳಿಸಿಕೊಂಡಿದ್ದ ಈ ಇಬ್ಬರು ಅಧಿಕಾರಿಗಳು 2.5 ಲಕ್ಷ ರೂ. ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಟ್ರೇಡರ್ಸ್ ಮಾಲಕ ಕುಮಾರಸ್ವಾಮಿ, ಕೃಷಿ ಅಧಿಕಾರಿ 1.5 ಲಕ್ಷ ಮತ್ತು ಸಹಾಯಕ ನಿರ್ದೇಶಕ 1 ಲಕ್ಷ ರೂ. ಲಂಚವನ್ನು ಕೇಳುತ್ತಿದ್ದಾರೆ ಎಂದು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರು ಪಡೆದು ಲೋಕಾಯುಕ್ತ ಪೊಲೀಸರು ಕಾರ್ಯಚರಣೆ ನಡೆಸಿ ಎರಡೂವರೆ ಲಕ್ಷ ರೂ ಲಂಚ ಪಡೆಯುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.